ಪುತ್ತೂರು: ‘ಕಲ್ಲೇಗ ಟೈಗರ್ಸ್’ ಹುಲಿ ವೇಷ ತಂಡದ ಅಕ್ಷಯ್ ಕಲ್ಲೇಗ (26) ಅವರ ಕೊಲೆ ಪ್ರಕರಣದ ಮೂರನೇ ಆರೋಪಿ, ಪುತ್ತೂರು ನಗರದ ಹೊರವಲಯದ ಪಡೀಲು ನಿವಾಸಿ ಮಂಜುನಾಥ್ ಅಲಿಯಾಸ್ ಮಂಜು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಅಕ್ಷಯ್ ಕಲ್ಲೇಗ ಅವರನ್ನು ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಮನೀಶ್, ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿ ಚೇತನ್, ಪಡೀಲು ನಿವಾಸಿ ಮಂಜುನಾಥ್ ಯಾನೆ ಮಂಜು ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷನಾಗಿದ್ದ ಕೇಶವ ಪಡೀಲು ಸೇರಿಕೊಂಡು 2023ರ ನ.6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ಕೊಲೆ ಮಾಡಿದ್ದರು.
ಅಕ್ಷಯ್ ಸ್ನೇಹಿತ ವಿಖ್ಯಾತ್ ನೀಡಿದ್ದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ನ್ಯಾಯಾಂಗ ಬಂಧನದಲ್ಲಿರುವ ಕೊಲೆ ಆರೋಪಿಗಳ ಪೈಕಿ 3ನೇ ಆರೋಪಿ ಮಂಜುನಾಥ್ ಅನಾರೋಗ್ಯದ ಕಾರಣ ಉಲ್ಲೇಖಿಸಿ, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ದೂರುದಾರ ವಿಖ್ಯಾತ್ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯಂತಿ ಸತೀಶ್ ಭಟ್, ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.