ADVERTISEMENT

ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ನ ಗಂಗಾಧರ ಭಟ್ಟ ಇನ್ನಿಲ್ಲ 

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 12:37 IST
Last Updated 27 ಆಗಸ್ಟ್ 2020, 12:37 IST
ಯು ಗಂಗಾಧರ ಭಟ್ಟ
ಯು ಗಂಗಾಧರ ಭಟ್ಟ   

ವಿಟ್ಲ: ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ,ಬಾಯಾರು ಗ್ರಾಮದ ಉಳುವಾನ ಗಂಗಾಧರ ಭಟ್ಟ (90) ಗುರುವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಳಿಕೆ ಹಾಗೂ ಮುದ್ದೇನಹಳ್ಳಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಗಂಗಾಧರ ಭಟ್ಟ ಅವರು, 7 ದಶಕಗಳ ಸುದೀರ್ಘ ಸೇವೆ ನೀಡಿದ್ದಾರೆ. 1962ರಲ್ಲಿ ಚೀನಾ ಆಕ್ರಮಣದ ಸಮಯದಲ್ಲಿ ಸೈನಿಕರ ನಿಧಿಗೆ ತಮ್ಮ ಕಿವಿಯಲ್ಲಿದ್ದ ಒಂಟಿಯನ್ನು (ಕಿವಿಯೋಲೆ) ನೀಡಿದ್ದರು.

1993ರಲ್ಲಿ ನಡೆದ ಬಂಟ್ವಾಳ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ, 2011ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿದ್ದರು. ಅಳಿಕೆ ಪಂಚಾಯಿತಿ ಹಾಗೂ ಸಹಕಾರಿ ಸಂಘದ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಹಿರಣ್ಯ ವೆಂಕಟೇಶ್ವರ ಭಟ್ ಸಂಪಾದಕತ್ವದಲ್ಲಿ ‘ಗಂಗಾಧರ ಗೌರವ’ ಎಂಬ ಅಭಿನಂದನಾ ಗ್ರಂಥ ಅವರಿಗೆ ಸಮರ್ಪಿತವಾಗಿದೆ.

ADVERTISEMENT

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ, ಎರುಂಬು ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶ, ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನದ ಕಲ್ಯಾಣ ಮಂಟಪದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಚಿತ ಆಸ್ಪತ್ರೆ, ಅನಾಥಾಲಯ, ಕೃಷಿ, ಪಶುಸಂಗೋಪನೆ, ಪುಸ್ತಕ ಪ್ರಕಾಶನ, ಪತ್ರಿಕಾ ಪ್ರಸಾರ, ವಸತಿ ನಿಲಯಗಳ ನಿರ್ವಹಣೆಯನ್ನೂ ನಡೆಸಿಕೊಂಡು ಬಂದಿದ್ದರು.

ಅಳಿಕೆ ಸಂಸ್ಥೆಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು. ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.