ಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಳವು ಪ್ರಕರಣದಲ್ಲಿ 50 ಗ್ರಾಂ ಚಿನ್ನಾಭರಣವನ್ನು ಹೆಚ್ಚುವರಿ ವಸೂಲಿ ಮಾಡಿರುವ ಆರೋಪದ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದರು.
ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿದು ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಉಳ್ಳಾಲದ ಮನೆಯೊಂದಲ್ಲಿ ಚಿನ್ನಾಭರಣ ಕಳವು ನಡೆದಿರುವ ಬಗ್ಗೆ 28 ಜೂನ್ 2024ರಂದು ದೂರು ದಾಖಲಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರು, ಇಬ್ಬರು ಬಾಲಕರು ಮತ್ತು ಅವರ ಮೂವರು ಗೆಳೆಯರನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಇದಾದ ಕೆಲದಿನಗಳ ನಂತರ ಆರೋಪಿಯೊಬ್ಬನ ತಾಯಿ, ಪೊಲೀಸ್ ಕಮಿಷನರ್ ಬಳಿ ಬಂದು ಇನ್‌ಸ್ಪೆಕ್ಟರ್ ವಿರುದ್ಧ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2024ರ ಜೂನ್‌ನಲ್ಲಿ ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದರು. ಮರುದಿನ ಆರೋಪಿಯ ತಾಯಿಯನ್ನು ಠಾಣೆಗೆ ಕರೆಯಲಾಗಿತ್ತು. ಈ ವೇಳೆ ತನ್ನ ಮುಂದೆ ಹಣದ ಬೇಡಿಕೆ ಇಡಲಾಗಿತ್ತು ಎಂದು ಆ ಮಹಿಳೆ ದೂರಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಮಗನ ಮೈಮೇಲಿದ್ದ 50 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ 50 ಗ್ರಾಂ ಚಿನ್ನಾಭರಣದ ಉಲ್ಲೇಖ ಇಲ್ಲ ಎಂದು ಮಹಿಳೆ ದೂರಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.