ADVERTISEMENT

ಆಳ್ವಾಸ್‌: ಕನ್ನಡ ಶಾಲೆಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳ ದಂಡು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 6:38 IST
Last Updated 3 ಮಾರ್ಚ್ 2025, 6:38 IST
<div class="paragraphs"><p>ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕಾಗಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು</p></div>

ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕಾಗಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು

   

ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಿಂದ ಮುಂಜಾನೆಯೇ ಪೋಷಕರೊಂದಿಗೆ ಬಂದಿದ್ದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಮುಂದೆ ಕಿಕ್ಕಿರಿದು ಸೇರಿದ್ದರು. ಅವರೆಲ್ಲರ ಕಣ್ಣುಗಳಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುವ ಕನಸು ಸ್ಫುರಿಸುತ್ತಿತ್ತು.

ಇದು ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆಯಲ್ಲಿ ಭಾನುವಾರ ಕಂಡ ದೃಶ್ಯ. ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕಾಗಿ ನಡೆದ ಪ್ರವೇಶ ಪರೀಕ್ಷೆಗೆ 18,634 ವಿದ್ಯಾರ್ಥಿಗಳು ಹಾಜರಾಗಿದ್ದರು. 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ADVERTISEMENT

2 ಗಂಟೆ 30 ನಿಮಿಷ ಅವಧಿಗೆ 150 ಅಂಕಗಳಿಗೆ ಪರೀಕ್ಷೆ ನಡೆಸಲಾಯಿತು. 6ರಿಂದ 9ನೇ ತರಗತಿವರೆಗಿನ ಪಠ್ಯವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯದ ಪ್ರಶ್ನೆಗಳನ್ನು ನೀಡಲಾಗಿತ್ತು. ಎ, ಬಿ, ಸಿ, ಡಿ, ಇ ಸರಣಿಯ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳು, ಪೋಷಕರು ಸೇರಿ 35 ಸಾವಿರಕ್ಕೂ ಅಧಿಕ ಜನ ಬಂದಿದ್ದರು. ಸಂಸ್ಥೆಯ ವತಿಯಿಂದ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ‘ಕನ್ನಡ ಮಾಧ್ಯಮ ಶಾಲೆಗಳನ್ನು ಗಟ್ಟಿಗೊಳಿಸದೆ ಕನ್ನಡ ಭಾಷೆಗೆ ಭವಿಷ್ಯವಿಲ್ಲ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವಿಚಾರವನ್ನು ಮುಂದೆ ಕೊಂಡುಹೋಗುವುದು ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಇದು ನಮ್ಮ ಋಣ ಸಂದಾಯ. ಸರ್ಕಾರ, ಇಲಾಖೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಮಾದರಿಯಾಗಿ ಪರಿಗಣಿಸಿ, ಇದೇ ರೀತಿಯ ಗುಣಾತ್ಮಕ ಶಿಕ್ಷಣ ನೀಡಿದರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೋಲಾಗದು’ ಎಂದರು.

‘ಈ ವರ್ಷ 1,800 ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮುಚ್ಚಿವೆ. 1,200 ಶಾಲೆಗಳಲ್ಲಿ 1ರಿಂದ 7ನೇ ತರಗತಿಗೆ ಏಕ ಶಿಕ್ಷಕರಿರುವುದು ಶೋಚನೀಯ. ರಾಜ್ಯದಲ್ಲಿರುವ ಸಂಸ್ಥೆಗಳು, ಉದ್ದಿಮೆಗಳು, ಖಾಸಗಿ ಕಂಪನಿಗಳು, ಕಾರ್ಪೋರೇಟ್ ಸಂಸ್ಥೆಗಳು ಆಳ್ವಾಸ್ ಮಾದರಿಯ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಮುಂದೆ ಬರಬೇಕು. ಸಿಎಸ್‌ಆರ್ ಫಂಡನ್ನು ಈ ನೆಲೆಯಲ್ಲಿ ವಿನಿಯೋಗಿಸಲು ಮನಸ್ಸು ಮಾಡಬೇಕು’ ಎಂದು ಆಗ್ರಹಿಸಿದರು.

‘ಸಿಎಸ್‌ಆರ್ ಫಂಡ್‌ನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಅಥವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬಳಸಲು ಮುಂದೆ ಬಂದರೆ ಖುದ್ದಾಗಿ ಜವಾಬ್ದಾರಿ ವಹಿಸಿಕೊಂಡು ಶಿಕ್ಷಣ ನೀಡಲು ಸಿದ್ದ. ಯಾವುದೇ ಸಂಘ– ಸಂಸ್ಥೆ, ವ್ಯಕ್ತಿ ಅಥವಾ ಸರ್ಕಾರ ಇಂತಹ ಅವಕಾಶ ನೀಡಿದರೆ ಅವರ ಹೆಸರಿನಲ್ಲಿ ನಮ್ಮ ಕ್ಯಾಂಪಸ್‌ನಲ್ಲಿ ಶಿಕ್ಷಣ ನೀಡಲು ಉತ್ಸುಕನಾಗಿದ್ದೇನೆ ಎಂದರು.

‘ನಾವಿಂದು ಬಡಮಕ್ಕಳಿಗೆ ಕನ್ನಡ ಮಾಧ್ಯಮ, ಸ್ಥಿತಿವಂತರಿಗೆ ಇಂಗ್ಲೀಷ್ ಮಾಧ್ಯಮ ಎಂಬ ಮನಃಸ್ಥಿತಿಗೆ ಬಂದಿದ್ದೇವೆ. ಬುದ್ಧಿವಂತಿಕೆಗೆ ಭಾಷೆಯ ತೊಡಕಿಲ್ಲ ಎಂಬುದನ್ನು ಜರ್ಮನಿ, ಜಪಾನ್, ಚೀನಾ, ರಷ್ಯಾ ಸಾಬೀತುಪಡಿಸಿವೆ. ಸರ್ಕಾರ ಜಿಲ್ಲೆಗೊಂದರಂತೆ ಮಾದರಿ ಕನ್ನಡ ಮಾಧ್ಯಮ ಶಾಲೆ ತೆರೆಯಲು ಮುಂದಾಗಬೇಕು’ ಎಂದರು.

‘ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಪೈಪೋಟಿಯಾಗಿ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಉಚಿತ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಗೆ ಮಕ್ಕಳನ್ನು ದಾಖಲಿಸುವ ಕನಸು ಇದರಿಂದಾಗಿ ಈಡೇರುತ್ತದೆ’ ಎಂದು ಭಟ್ಕಳದ ಗಣೇಶ್ ಮಂಜುನಾಥ್ ಮೊಗೇರ್ ಹೇಳಿದರು.

ಪರೀಕ್ಷೆ ಕೇಂದ್ರದ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು ಪೋಷಕರು

Cut-off box - ಆಯ್ಕೆ ಪ್ರಕ್ರಿಯೆ 3 ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಒಎಂಆರ್‌ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷೆ. ಇದರಲ್ಲಿ ಸಂಸ್ಥೆ ನಿಗದಿಪಡಿಸಿದ ಮಾನದಂಡ ಗಳಿಸಿದವರು ಮುಖ್ಯಹಂತಕ್ಕೆ ಆಯ್ಕೆಯಾಗುತ್ತಾರೆ. ಈ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ಕಲಿಕಾ ಸಾಮರ್ಥ್ಯ ಕೌಶಲ ಗಮನಿಸಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಶಿಕ್ಷಣ ತಜ್ಞರು ವಿಷಯ ತಜ್ಞರನ್ನು ಒಳಗೊಂಡಿರುವ ತಂಡ ರಚಿಸಲಾಗಿದೆ. 16 ವರ್ಷಗಳಿಂದ ಪ್ರವೇಶ ಪರೀಕ್ಷೆ ನಡೆಸಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಕಳೆದ ವರ್ಷ 19224 ಅರ್ಜಿ ಸ‌ಲ್ಲಿಕೆಯಾಗಿದ್ದು 15896 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಆ ಪೈಕಿ 150 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.