ADVERTISEMENT

ಆಳ್ವಾಸ್ ಸಹಕಾರ ಸಂಘ:₹ 3.36 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 14:05 IST
Last Updated 25 ಆಗಸ್ಟ್ 2024, 14:05 IST
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶನಿವಾರ ನಡೆದ ಆಳ್ವಾಸ್ ಸಹಕಾರ ಸಂಘದ ಮಹಾಸಭೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ  ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶನಿವಾರ ನಡೆದ ಆಳ್ವಾಸ್ ಸಹಕಾರ ಸಂಘದ ಮಹಾಸಭೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ₹ 3.36 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 17 ಲಾಭಾಂಶ ಘೋಷಿಸಿದೆ.

ಸಂಘದ 8ನೇ ಮಹಾಸಭೆಯಲ್ಲಿ ವರದಿ ವಾಚಿಸಿದ ಸಂಘದ ಕಾರ್ಯನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ ₹ 150 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಈ ವರ್ಷ ₹ 50 ಲಕ್ಷದಷ್ಟು ಹೆಚ್ಚು ಲಾಭ ಗಳಿಸಿದೆ. ಶೇ 99.20 ಸಾಲ ವಸೂಲಾತಿ ಮಾಡಿದೆ. ಪ್ರಸ್ತುತ 3,876 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಮುಂದಿನ ವರ್ಷ ₹ 100 ಕೋಟಿ ಠೇವಣಿ ಸಂಗ್ರಹಿಸಿ, ಬ್ಯಾಂಕ್‌ ವ್ಯವಹಾರವನ್ನು ₹ 175 ಕೋಟಿಗೆ ಹೆಚ್ಚಿಸುವ ಗುರಿ ಇದೆ ಎಂದರು.

2023-24ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ, ಆಳ್ವಾಸ್ ದತ್ತು ಸ್ವೀಕಾರ ಯೋಜನೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪಾ ಕೊಣ್ಣೂರು, 625ಕ್ಕೆ 617 ಅಂಕ ಪಡೆದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮುರುಗೇಶ್ ಬಿರಾದರ್ ಪಾಟೀಲ್, ಋತುರಾಜ್ ರಾಮಕೃಷ್ಣ ಚಿನಗೆ, ಆಳ್ವಾಸ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಮನೀಷಾ ಎನ್. (625ರಲ್ಲಿ 622 ಅಂಕ), ಮಂಗಳೂರು ವಿವಿಯ ಅಂತಿಮ ವಾಣಿಜ್ಯ ಪದವಿಯ ಆರು ವಿಷಯಗಳಲ್ಲಿ ಪೂರ್ಣಾಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಶೆಟ್ಟಿ ಅವರಿಗೆ ತಲಾ ₹ 10 ಸಾವಿರ ನಗದಿನೊಂದಿಗೆ ಅಭಿನಂದಿಸಲಾಯಿತು.

ಸಹಕಾರ ಶಿಕ್ಷಣ ನಿಧಿಯ ₹ 3.03 ಲಕ್ಷದ ಚೆಕ್ ಅನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಗೆ ಮೂಡುಬಿದಿರೆಯ ಸಹಕಾರಿ ತರಬೇತಿ ಸಂಸ್ಥೆಯ ಪುಷ್ಪರಾಜ್ ಮೊಯಿಲಿ ಮೂಲಕ ಹಸ್ತಾಂತರಿಸಲಾಯಿತು.

ನಿರ್ದೇಶಕರಾದ ಶ್ರೀಪತಿ ಭಟ್, ನಾರಾಯಣ ಪಿ.ಎಂ., ವಿವೇಕ್ ಆಳ್ವ, ರಾಮಚಂದ್ರ ಮಿಜಾರು, ರಮೇಶ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ಅಶ್ವಿನ್ ಜೊಸ್ಸಿ ಪಿರೇರಾ, ಮೊಹಮ್ಮದ್ ಷರೀಫ್, ರಮೇಶ್ ಶೆಟ್ಟಿ, ಮೀನಾಕ್ಷಿ ಭಾಗವಹಿಸಿದ್ದರು.

ಎ.ಮೋಹನ್ ಪಡಿವಾಳ್ ಸ್ವಾಗತಿಸಿದರು. ಕೆ.ವೇಣುಗೋಪಾಲ ಶೆಟ್ಟಿ ನಿರೂಪಿಸಿ, ಜಯರಾಮ್ ಕೋಟ್ಯಾನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.