ADVERTISEMENT

ಮೂವರಿಗೆ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 18:37 IST
Last Updated 9 ಡಿಸೆಂಬರ್ 2023, 18:37 IST
ಮೈಸೂರು ಮಂಜುನಾಥ
ಮೈಸೂರು ಮಂಜುನಾಥ   

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡುವ ‘ಆಳ್ವಾಸ್‌ ವಿರಾಸತ್‌ 2023’ ಪ್ರಶಸ್ತಿಗೆ ವಯೋಲಿನ್‌ ವಾದಕ ಮೈಸೂರು ಮಂಜುನಾಥ್‌, ಕೊಳಲು ವಾದಕ ಪ್ರವೀಣ್‌ ಗೋಡ್ಖಿಂಡಿ ಹಾಗೂ ಗಾಯಕ ವಿಜಯ ಪ್ರಕಾಶ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಮೂಡುಬಿದಿರೆಯಲ್ಲಿ ಇದೇ 14ರಿಂದ 17ರವರೆಗೆ ಆಳ್ವಾಸ್‌ ವಿರಾಸತ್‌ 2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ಇದೇ 17ರಂದು ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಇದೇ 14ರಂದು ಸಂಜೆ 5.30ಕ್ಕೆ ವಿರಾಸತ್‌ಗೆ ಚಾಲನೆ ನೀಡಲಿದ್ದಾರೆ. ಅಂದು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, 100ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 3000ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ.  ಅದೇ ದಿನ ನಡೆಯುವ ಸಾಂಸ್ಕೃತಿಕ ರಥ ಮತ್ತು ರಥಾರತಿ ಈ ಸಲದ ವಿರಾಸತ್‌ನ ವೈಶಿಷ್ಟ್ಯ. ಕಾಶಿಯಲ್ಲಿ ಗಂಗಾರತಿ ನಡೆಸುವ ತಂಡವೇ ಇಲ್ಲಿ ರಥಾರತಿಯನ್ನು ನೆರವೇರಿಸಲಿದೆ’ ಎಂದರು.

ADVERTISEMENT
ಪ್ರವೀಣ್‌ ಗೋಡ್ಖಿಂಡಿ

‘15ರಂದು ಸಂಜೆ 6ರಿಂದ ಬೆನ್ನಿ ದಯಾಳ್‌ ಅವರು ‘ಗಾನ ವೈಭವ’ವನ್ನು, 16ರಂದು ಶ್ರೇಯಾ ಘೋಷಾಲ್‌ ಅವರು ‘ಭಾವ ಲಹರಿ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ 17ರಂದು ಮೈಸೂರು ಮಂಜುನಾಥ್‌, ಪ್ರವೀಣ್‌ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್‌ ಅವರು ತಾಳ ವಾದ್ಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪ್ರತಿ ದಿನವೂ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ. ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನಗಳು ವಿರಾಸತ್‌ಗೆ ಮೆರುಗು ತುಂಬಲಿವೆ’ ಎಂದು ಹೇಳಿದರು.

ವಿಜಯ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.