ADVERTISEMENT

ಆಳ್ವಾಸ್ ವಿರಾಸತ್‌ನ ವಸ್ತು ಪ್ರದರ್ಶನ: ಪುಸ್ತಕ ಮಾರಿ ಸಿನಿಮಾ ಮಾಡಹೊರಟವರು

₹ 1 ಕೋಟಿ ಮೊತ್ತ ಸಂಗ್ರಹಿಸುವ ಗುರಿ; ಮಣ್ಣಿನ ಪರಿಮಳ ಇರುವ ಕಥಾಸಂಕಲನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 13:21 IST
Last Updated 13 ಡಿಸೆಂಬರ್ 2024, 13:21 IST
ಪುಸ್ತಕ ಮಾರಾಟ ಮಾಡಿ ಸಿನಿಮಾ ನಿರ್ಮಾಣ ಮಾಡಲು ಹೊರಟಿರುವ ಯುವಕರ ತಂಡ ಆಳ್ವಾಸ್ ವಿರಾಸತ್ ನಲ್ಲಿ
ಪುಸ್ತಕ ಮಾರಾಟ ಮಾಡಿ ಸಿನಿಮಾ ನಿರ್ಮಾಣ ಮಾಡಲು ಹೊರಟಿರುವ ಯುವಕರ ತಂಡ ಆಳ್ವಾಸ್ ವಿರಾಸತ್ ನಲ್ಲಿ   

ಮೂಡುಬಿದಿರೆ: ಸಿನಿಮಾ ಮಾಡುವ ಕನಸು ಹೊತ್ತುಕೊಂಡು ಇಲ್ಲಿನ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್‌ನ ವಸ್ತು ಪ್ರದರ್ಶನ ಮಳಿಗೆಗೆ ಬಂದಿರುವ ಯುವಕರ ತಂಡವೊಂದು ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ.

ಬೆಂಗಳೂರು,‌ ಮೈಸೂರು,‌ ಕಲಬುರಗಿ, ಹಾಸನ‌ ಮತ್ತಿತರ‌ ಜಿಲ್ಲೆಗಳ ಈ ಯುವಕರು ಸಿನಿಮಾಗೆ ತಗಲುವ ವೆಚ್ಚ ಭರಿಸುವುದಕ್ಕಾಗಿ ತಾವೇ 'ಸೃಷ್ಟಿಸಿದ' ಕಥಾ ಸಂಕಲನವನ್ನು ಮಾರಾಟ ಮಾಡುತ್ತಿದ್ದಾರೆ.

ರಂಗಭೂಮಿ ಕಲಾವಿದರಾಗಿರುವ 40‌ ಮಂದಿ ಯುವಕರು ಸಿನಿಮಾ ಸೆಟ್‌ನಲ್ಲಿ ನಿರ್ದೇಶಕರ ಜೊತೆ ಕೆಲಸ‌ ಮಾಡುತ್ತಿದ್ದಾರೆ. ಕಲಾವಿದರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ಇಲ್ಲೀಗಲ್’ ಎಂಬ ಸಿನಿಮಾ ನಿರ್ಮಿಸಲು‌ ಕಥೆ,‌ ಚಿತ್ರಕಥೆ ಇತ್ಯಾದಿ ಸಿದ್ಧ ಮಾಡಿರುವ ಇವರಿಗೆ ಆರ್ಥಿಕ‌ ಸಮಸ್ಯೆ ಕಾಡಿದಾಗ ಕಂಡುಕೊಂಡ ದಾರಿ ಪುಸ್ತಕ ಮಾರಾಟ. ಇದಕ್ಕಾಗಿ ನೆಲದ ಗುಣ ಇರುವ ಜಾನಪದ ಕಥೆಗಳನ್ನು ಹೆಕ್ಕಿ ಸಂಕಲನ ಮಾಡಿದ್ದಾರೆ‌. ಅದರಲ್ಲಿ ಅಜ್ಜಿಕತೆ ಜೊತೆಯಲ್ಲಿ ಫ್ಯಾಂಟಸಿ, ಕಾಮಿಕ್, ಮಹಿಳಾ ಪ್ರಧಾನವಾದುದು, ಗಂಭೀರ ವಸ್ತುವನ್ನು ಒಳಗೊಂಡ ಕತೆಗಳೂ ಇವೆ. 'ನಿಧಿ' ಎಂಬ ಹೆಸರಿನ ಕೃತಿಯ 10 ಸಾವಿರ ಪ್ರತಿಗಳನ್ನು‌ ಮುದ್ರಿಸಿದ್ದು‌ 8 ಸಾವಿರ ಪ್ರತಿಗಳು ಒಂದು ತಿಂಗಳಲ್ಲಿ  ಮಾರಾಟ ಆಗಿವೆ.

'ಇಲ್ಲೀಗಲ್ ಎಂಬ 7 ಮಂದಿ ಯುವಕರ ಕಥೆಯನ್ನು ಒಳಗೊಂಡ ಸಿನಿಮಾ ಮಾಡಲು ಸಜ್ಜಾಗಿದ್ದೇವೆ.‌ ಪುಸ್ತಕ ಮಾರಾಟ ಮಾಡುವುದಕ್ಕಾಗಿ ಜನರನ್ನು ನೇರವಾಗಿ ಭೇಟಿಯಾಗುತ್ತಿದ್ದೇವೆ. ಸಿನಿಮಾ ಟಾಕೀಸ್, ಹೋಟೆಲ್, ಕಾಲೇಜು, ವಿವಿಧ ಮೇಳಗಳು, ರಂಗಭೂಮಿ ಮುಂತಾದ ಕಡೆಗಳಿಗೆ ಹೋಗುತ್ತಿದ್ದೇವೆ. ಮಂಡ್ಯ ಸಾಹಿತ್ಯ‌ ಸಮ್ಮೇಳನದಲ್ಲಿ ಹೆಚ್ಚು ಮಾರಾಟ ಮಾಡುವ ಗುರಿ ಇದೆ' ಎಂದು ಕಥೆಗಳ ಸಂಪಾದಕ‌ ಮತ್ತು ಚಿತ್ರದ ನಿರ್ದೇಶಕ ಕೌಶಿಕ್ ರತ್ನ ತಿಳಿಸಿದರು.

'ಪುಸ್ತಕಗಳನ್ನು ಮಳಿಗೆಗಳಲ್ಲಿ ಇರಿಸಿ ಮಾರಾಟ ಮಾಡಿದರೆ ಅವರಿಗೆ ಕಮಿಷನ್ ಕೊಡಬೇಕು. ಹೀಗಾಗಿ ನಾವೇ ನೇರವಾಗಿ ಗ್ರಾಹಕರ ಬಳಿ ಹೋಗಲು‌ ನಿರ್ಧರಿಸಿದೆವು.‌ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಒಂದು‌ ಲಕ್ಷ ಪ್ರತಿಗಳನ್ನು ಮಾರುವ ಉದ್ದೇಶ ಇದೆ' ಎಂದು ಅವರು ತಿಳಿಸಿದರು.
8431367915 ವಾಟ್ಸ್ ಆ್ಯಪ್‌ ಸಂಖ್ಯೆಗೆ ಸಂದೇಶ ಕಳುಹಿಸಿದರೆ ಪುಸ್ತಕವನ್ನು ಮನೆಗೇ ತಲುಪಿಸಲಾಗುತ್ತದೆ ಎಂದು ಅವರು  ತಿಳಿಸಿದರು.

ಹೂವಿನ ಲೋಕದಲ್ಲಿ ಕಲೆಯ ಘಮಲು

ಆಳ್ವಾಸ್ ವಿರಾಸತ್ ಅಂಗವಾಗಿ ನಡೆಯುತ್ತಿರುವ ಪುಷ್ಪ‌ ಪ್ರದರ್ಶನದಲ್ಲಿ ಬಗೆಬಗೆಯ ಹೂಗಳ ಲೋಕ‌ದ ನಡುವೆ ಕಲಾಸಂಸ್ಕೃತಿಯ ಘಮಲು ಹರಡಿದೆ.

ಸಣ್ಣಗಾತ್ರದ ಮತ್ತು ದೊಡ್ಡ ದೊಡ್ಡ ಹೂಗಳು ಅರಳಿ ನಿಂತಿರುವ ಪ್ರದರ್ಶನದಲ್ಲಿ ಆಲಂಕಾರಿಕ ಬಣ್ಣಬಣ್ಣದ ಸಸ್ಯಗಳೂ ಮನ ಸೆಳೆಯುತ್ತವೆ.
ಇವುಗಳ ಮಧ್ಯದಲ್ಲೆಲ್ಲ ಜಾನಪದ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಸಾರುವ ವೈವಿಧ್ಯಮಯ ಕಲಾಕೃತಿಗಳನ್ನು ಇರಿಸಲಾಗಿದೆ.

ಪ್ರವೇಶ ದ್ವಾರದಲ್ಲಿ ಎತ್ತಿನಗಾಡಿಯ ಪ್ರತಿಕೃತಿ, ಭುವನೇಶ್ವರಿ‌ ದೇವಿಯ ಪ್ರತಿಮೆ, ನಾಡಿನ ವಿವಿಧ ಭಾಗದ ಜನರ ವಸ್ತ್ರವೈವಿಧ್ಯವನ್ನು ಪರಿಚಯುಸುವ ಪ್ರತಿಮೆಗಳು ಇವೆ.‌

ಒಳಗೆ ಹೋದರೆ ಮಹಿಷಾಸುರ, ಯಕ್ಷಗಾನ ವೇಷಧಾರಿ,  ಸ್ತ್ರೀವೇಷದ ಪರಿಚಯ, ವೀರಭದ್ರ ಕುಣಿತ, ಸೋಮನ ಕುಣಿತದ ಪ್ರಸಂಗಗಳು ಮತ್ತು ಅನೇಕ ಜಾನಪದ ಕಲೆಗಳ ಮಾಹಿತಿ ನೀಡುವ ಪ್ರತಿಮೆಗಳು ಇವೆ. 24 ತೀರ್ಥಂಕರರನ್ನು ಪರಿಚಯಿಸುವ ಪ್ರತಿಮೆಗಳನ್ನು ಸಾಲಾಗಿ ನಿಲ್ಲಿಸಲಾಗಿದೆ‌.

ಇದೆಲ್ಲದರ ಜೊತೆಯಲ್ಲಿ ಹೂವಿನಲ್ಲಿ‌ ಸಿಂಗಾರಗೊಳಿಸಿರುವ ಹನುಮಂತ, ಒಂಟೆ, ಆನೆ, ಪಕ್ಷಿಗಳು, ಶಿವಲಿಂಗ, ಜ್ಞಾನಪೀಠ ಪುರಸ್ಕೃತರ ಪರಿಚಯ ಇದೆ. ಸಾಲುಮರದ ತಿಮ್ಮಕ್ಕ, ಸುಕ್ರು ಬೊಮ್ಮುಗೌಡ, ತುಳಸಿಗೌಡ ಅವರ ಬೃಹತ್ ಪ್ರತಿಮೆಗಳೂ ಇವೆ. 

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.