ಮಂಗಳೂರು: ಮರೆಗುಳಿ ಸಮಸ್ಯೆಗೆ ಪ್ರೀತಿಯ ಮಾತುಗಳು ಮತ್ತು ಆರೈಕೆಯೊಂದೇ ಪರಿಹಾರ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಅಭಿಪ್ರಾಯಪಟ್ಟರು.
ನಗರದ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೀರಿಯಾಟ್ರಿಕ್ ಎಂಪವರ್‌ಮೆಂಟ್ (ಪೇಜ್) ಸಂಸ್ಥೆ ಗುರುವಾರ ಆಯೋಜಿಸಿದ್ದ ವಿಶ್ವ ಮರೆಗುಳಿ ಸಮಸ್ಯೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಜನಿಸಿದಾಗಿನಿಂದ ಸಾಯುವ ವರೆಗೂ ಸಂಷರ್ಷದಲ್ಲೇ ಕಳೆಯುತ್ತಾನೆ. ಮಗುವೊಂದು ಜನಿಸಿದಾಗ ಸಂಭ್ರಮಿಸುವವರು ವಯಸ್ಸಾದವರನ್ನು ನಗಣ್ಯ ಮಾಡುವುದು ಬೇಸರದ ವಿಷಯ ಎಂದರು.
ಹಿರಿಜೀವಗಳು ಒಳ್ಳೆಯ ವಯಸ್ಸಿನಲ್ಲಿ ತಮ್ಮವರಿಗಾಗಿ ಎಲ್ಲವನ್ನೂ ಕೊಟ್ಟಿರುತ್ತಾರೆ. ಆದರೆ ವಯಸ್ಸಾದ ಮೇಲೆ ಏನನ್ನೂ ಕೇಳುವುದಿಲ್ಲ. ಅವರಿಗೆ ಬೇಕಾಗಿರುವುದು ಪ್ರೀತಿ ಮತ್ತು ಕಾಳಜಿ ಮಾತ್ರ. ಅದನ್ನು ಕೊಡುವುದು ಮಕ್ಕಳ ಕರ್ತವ್ಯ ಆಗಬೇಕು ಎಂದರು ಅವರು ಹೇಳಿದರು.
ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಇದ್ದು ಮಿದುಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಲಭ್ಯವಿದೆ ಎಂದು ಅವರು ತಿಳಿಸಿದರು.
ಆಯುಷ್ ಆಸ್ಪತ್ರೆಯ ನಿರ್ದೇಶಕ ಡಾ.ಮಹಮ್ಮದ್ ಇಕ್ಬಾಲ್, ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾದರ್ ಪೌಲ್‌ಸ್ಟನ್ ಲೂಕಸ್ ಲೋಬೊ, ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಎನ್ ಎಫ್ ಮೂಸಬ್ಬ, ಡಾ.ಅಮಿತಾ ಪಿ.ಮಾಡ್ಲಾ, ರೋಟರಿ ಕ್ಲಬ್‌ನ ಕೃಷ್ಣ ಶೆಟ್ಟಿ, ಪೇಜ್‌ನ ಡಾ.ಪ್ರಭಾ ಅಧಿಕಾರಿ ಪಾಲ್ಗೊಂಡಿದ್ದರು. ಡಾ.ಸಿ.ವಿ ರಘುವೀರ್ ಸ್ವಾಗತಿಸಿದರು. ಕಿರು ಪ್ರಹಸನ, ಹಾಡು, ನೃತ್ಯ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.