ADVERTISEMENT

ಬಂಟ್ವಾಳ: ಅಮರನಾಥ ಯಾತ್ರೆಗೆ ತೆರಳಿದ ಬಂಟ್ವಾಳದ ತಂಡ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 15:32 IST
Last Updated 9 ಜುಲೈ 2022, 15:32 IST
ಅಮರನಾಥ ಯಾತ್ರೆಗೆ ತೆರಳಿದ್ದ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಮತ್ತು ರಾಯಿ ಮತ್ತಿತರ ಪ್ರದೇಶಗಳ ಯುವಕರ ತಂಡ
ಅಮರನಾಥ ಯಾತ್ರೆಗೆ ತೆರಳಿದ್ದ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಮತ್ತು ರಾಯಿ ಮತ್ತಿತರ ಪ್ರದೇಶಗಳ ಯುವಕರ ತಂಡ   

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಿಂದ ಯಾತ್ರಿಕರ ತಂಡವೊಂದು ಅಮರನಾಥ ಯಾತ್ರೆಗೆ ತೆರಳಿದ್ದು, ಅಲ್ಲಿ ಸಂಭವಿಸಿರುವ ದಿಢೀರ್ ಪ್ರವಾಹದಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ತಂಡದ ಸದಸ್ಯರು ಖಚಿತಪಡಿಸಿದ್ದಾರೆ.

ಬಂಟ್ವಾಳದ ನರಿಕೊಂಬು, ರಾಯಿ ಮತ್ತು ಸಜಿಪ, ಸರಪಾಡಿ ಮತ್ತಿತರ ಗ್ರಾಮಗಳ 30 ಮಂದಿಯ ತಂಡ ಮಂಗಳವಾರ ಅಮರನಾಥ ಯಾತ್ರೆ ಕೈಗೊಂಡಿತ್ತು. ಈ ಯುವಕರ ತಂಡವು ಮೇಘಸ್ಫೋಟ ಸಂಭವಿಸಿದ ಸ್ಥಳದಿಂದ 28 ಕಿ.ಮೀ. ದೂರದಲ್ಲಿ ಸುರಕ್ಷಿತರಾಗಿ ಇರುವುದಾಗಿ ತಂಡದಲ್ಲಿದ್ದವರು ತಿಳಿಸಿದ್ದಾರೆ. ಮಂಗಳೂರು ತಾಲ್ಲೂಕಿನ ಇಬ್ಬರು ಹಾಗೂ ಕಾಸರಗೋಡು ಜಿಲ್ಲೆಯ ಒಬ್ಬರು ಅಮರನಾಥ ಯಾತ್ರೆ ಕೈಗೊಂಡಿದ್ದು, ಅವರೂ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ಮೇಘ ಸ್ಪೋಟದಿಂದ 15ಕ್ಕೂ ಮಿಕ್ಕಿ ಮಂದಿ ಮೃತಪಟ್ಟಿದ್ದರಿಂದ ಜಿಲ್ಲೆಯ ಹಲವಾರು ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದವು.

ADVERTISEMENT

‘ಬಂಟ್ವಾಳ ತಾಲ್ಲೂಕಿನ ತಂಡವು ರಕ್ಷಣಾ ಪಡೆಗಳ ಸುಪರ್ದಿಯಲ್ಲಿ ನಾವು ಸುರಕ್ಷಿತವಾಗಿದ್ದೇವೆ. ಈ ಕುರಿತು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರಿಗೂ ಶನಿವಾರ ಮಾಹಿತಿ ನೀಡಿದ್ದೇವೆ. ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವಕಾಶ ಸಿಕ್ಕರೆ ಭಾನುವಾರ ಬೆಳಿಗ್ಗೆ 5ಗಂಟೆಗೆ ಮತ್ತೆ ಅಮರನಾಥ ಯಾತ್ರೆ ಮುಂದುವರಿಸುತ್ತೇವೆ’ ಎಂದು ಯಾತ್ರಿಕರ ತಂಡದಲ್ಲಿರುವ ನರಿಕೊಂಬು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು 'ಪ್ರಜಾವಾಣಿ'ಗೆ ತಿಳಿಸಿದರು.

ಬಿಜೆಪಿ ಯುವ ಮುಖಂಡ ಸುರೇಶ ಕೋಟ್ಯಾನ್, ರಾಯಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ಸಜಿಪ ಮುನ್ನೂರು ಗ್ರಾಮದ ಹೊರೆಕಾಯಿ ಮನೆಯ ತಿಲಕ್ ರಾಜ್, ಸರಪಾಡಿ ಗ್ರಾಮದ ಕುದ್ಮುಂಜ ಮನೆಯ ಪ್ರದೀಪ್ ಗೌಡ, ಪುರಂದರ ಗೌಡ, ವಿನಯ ಗೌಡ, ಮುನ್ನಲಾಯಿ ಮನೆಯ ನವೀನ್ ಗೌಡ, ಕೃಷ್ಣಪ್ಪ ಗೌಡ ಮತ್ತು ನಾಣ್ಯಪ್ಪ ಪೂಜಾರಿ, ಸರಪಾಡಿಯ ರಾಜೇಶ್ ಪೂಜಾರಿ ಮತ್ತು ಸತೀಶ್ ಗೌಡ, ರಾಯಿ ಗ್ರಾಮದ ರಾಯಿಬೆಟ್ಟು ಮನೆಯ ಸಂತೋಷ್ ಕುಮಾರ್ ಮತ್ತು ವಿಘ್ನೇಶ್,ಪೇರಳೆಗುಡ್ಡೆ ಮನೆಯ ಮನೀಷ್ ಪಿ.ಗೌಡ, ದಡ್ಡು ಮನೆಯ ಸಂತೋಷ್ ಪಿ.,ಮಿಯಾಲು ಮನೆಯ ಪ್ರದೀಪ್ ಗೌಡ, ನರಿಕೊಂಬು ಗ್ರಾಮದ ಮಾಣಿ ಮಜಲು ಮನೆಯ ಸುರೇಶ್, ರಂಜಿತ್, ಕರ್ಬೆಟ್ಟು ಮನೆಯ ಯಶೋಧರ, ಮಾರುತಿನಗರ ಮನೆಯ ಸಂತೋಷ್, ತಿಲಕ್ ರಾಜ್ ಮತ್ತು ಪ್ರದೀಪ್, ಶಂಭೂರು ಗ್ರಾಮದ ಅಡೆಪಿಲ ಮನೆಯ ಹರಿಪ್ರಸಾದ್, , ಬಿ.ಮೂಡ ಗ್ರಾಮದ ಕೈಕುಂಜೆ ಮನೆಯ ನವೀನ, ಮಾಣಿ ಗ್ರಾಮದ ಕಡೆಕಣ್ಣು ಮನೆಯ ಅಶ್ವಿನ್ ಭಟ್‌ ಹಾಗೂ ಕಳ್ಳಿಗೆ ಗ್ರಾಮದ ಮುಂಡಾಜೆ ಮನೆಯ ಚಂದ್ರಶೇಖರ ಅವರು ಅಮರನಾಥ ಯಾತ್ರೆ ಕೈಗೊಂಡಿರುವ ಒಂದು ತಂಡದಲ್ಲಿದ್ದಾರೆ.

ಪಜೀರು ಗ್ರಾಮದ ಕಂಬ್ಲಪದವು ಮಿಯಾರಿನ ನಿಖಿಲೇಶ್, ಮಂಗಳೂರು ಬಿಕರ್ನಕಟ್ಟೆಯ ಶುಭಂ ನಾಯಕ್ ಹಾಗೂ ಕಾಸರಗೋಡು ಮಂಗಲ್ಪಾಡಿಯಪ್ರವೀಣ್ ಅವರೂ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.

‘ನೆರವಿಗಾಗಿ 1077 ಸಂಖ್ಯೆಗೆ ಕರೆ ಮಾಡಿ’

‘ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥ ಯಾತ್ರೆ ಕೈಗೊಂಡವರು ಪ್ರವಾಹಕ್ಕೆ ಸಿಲುಕಿದ್ದರೆ ಅಥವಾ ಅಲ್ಲೇ ಸುರಕ್ಷಿತವಾಗಿ ಇದ್ದಲ್ಲಿ ನಿಯಂತ್ರಣ ಕೊಠಡಿಯ ಶುಲ್ಕರಹಿತ ಸಂಖ್ಯೆಯನ್ನು (1077) ಸಂಪರ್ಕಿಸಬಹುದು. ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ವ್ಯವಸ್ಥೆ ಕಲ್ಪಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.