ADVERTISEMENT

ಮಂಗಳೂರು: ಜಂತುಹುಳ ನಿವಾರಣೆಗೆ ಮಾತ್ರೆ ವಿತರಣೆ

ನ.23ರಿಂದ 27ರವರೆಗೆ ಜಿಲ್ಲೆಯಲ್ಲಿ ಕಾರ್ಯಕ್ರಮ: ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 14:33 IST
Last Updated 20 ನವೆಂಬರ್ 2021, 14:33 IST
ಡಾ. ಕಿಶೋರ್‌ ಕುಮಾರ್‌
ಡಾ. ಕಿಶೋರ್‌ ಕುಮಾರ್‌   

ಮಂಗಳೂರು: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಜಂತುಹುಳ ನಿವಾರಣೆಗಾಗಿ ನ.23ರಿಂದ 27ರವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ 1ರಿಂದ 19 ವರ್ಷದವರಿಗೆ ಆಲ್ಬೆಂಡಝೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಕುರಿತು ಅವರು ಮಾಹಿತಿ ನೀಡಿದರು. ನ.23ರ ಬೆಳಿಗ್ಗೆ 10 ಗಂಟೆಗೆ ಬಿ.ಇಡಿ ಕಾಲೇಜಿನ ಪ್ರೌಢಶಾಲೆಯ ಪಿಯು ಬ್ಲಾಕ್‍ನಲ್ಲಿ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಆಲ್ಬೆಂಡಝೋಲ್ ಮಾತ್ರೆಗಳನ್ನು ನೋಡಲ್ ಅಧ್ಯಾಪಕರ ಮೂಲಕ ನೀಡಲಾಗುವುದು. 1ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಈ ಮಾತ್ರೆಯನ್ನು ವಿತರಿಸಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ಪಡೆಯದ ಮಕ್ಕಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ವಿತರಿಸುವರು ಎಂದರು.

ತೀವ್ರ ಜಂತುಹುಳ ಬಾಧೆಯಿಂದಾಗಿ ಹೊಟ್ಟೆನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತಾಗುವುದು ಕಂಡುಬರುತ್ತದೆ. ಜಂತುಹುಳ ರಕ್ತವನ್ನು ಹೀರುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಅದು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಈ ಮೂಲಕ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಜಂತುಹುಳ ಭಾದೆಯಿಂದ ಮಕ್ಕಳು ರೋಗಗ್ರಸ್ತರಾಗುತ್ತಾರೆ ಎಂದು ತಿಳಿಸಿದರು.

ADVERTISEMENT

ಜಂತುಹುಳ ನಿವಾರಣೆಗಾಗಿ ವಿಶ್ವ ಸಂಸ್ಥೆಯು ಪ್ರಮಾಣೀಕರಿಸಿದ ಆಲ್ಬೆಂಡಝೋಲ್ 400 ಮೀ. ಗ್ರಾಂ ಮಾತ್ರೆ ಉಚಿತವಾಗಿ ನೀಡಲಾಗುವುದು. ಈ ಮಾತ್ರೆಗಳನ್ನು 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ವಿತರಿಸಲಾಗುತ್ತಿದೆ. 2 ವರ್ಷದವರೆಗಿನ ಮಕ್ಕಳಿಗೆ ಅರ್ಧ ಆಲ್ಬೆಂಡಝೋಲ್ ಮಾತ್ರೆ (ಹುಡಿ ಮಾಡಿ ಎದೆ ಹಾಲಿನಲ್ಲಿ ಬೆರೆಸಿ ನೀಡುವುದು) ಹಾಗೂ 19 ವರ್ಷದವರೆಗಿನ ಮಕ್ಕಳಿಗೆ ಪೂರ್ಣ ಆಲ್ಬೆಂಡಝೋಲ್ ಮಾತ್ರೆ (ಚೀಪಿ ತಿನ್ನುವುದು) ನೀಡಲಾಗುವುದು ಎಂದು ಮಾಹಿತಿ ನೀಡಿದರು.

ರಕ್ತಹೀನತೆ ತಡೆಗಟ್ಟುವುದು, ಪೌಷ್ಟಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಲು, ಏಕಾಗ್ರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿ ಸುಧಾರಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಸುಶ್ರೂಷಣಾಧಿಕಾರಿ ಡಾ. ಲಿಸ್ಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.