ಮಂಗಳೂರು: ಡಿಸೆಂಬರ್ ತಿಂಗಳಿನಲ್ಲಿ 2,53,658 ಆದ್ಯತಾ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರಿಗೆ ಒಟ್ಟು ₹17.68 ಕೋಟಿ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರವು 2023 ಜುಲೈನಿಂದ ಅಂತ್ಯೋದಯ ಪಡಿತರ ಚೀಟಿಯಲ್ಲಿ 4 ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಹಾಗೂ ಮೂರು ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯನಿಗೆ ನೀಡುವ 5 ಕೆ.ಜಿ ಅಕ್ಕಿ ಬದಲಾಗಿ ₹ 170 ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಪಡಿತರ ಚೀಟಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರಂತೆ ಡಿಸೆಂಬರ್ ತಿಂಗಳ ಹಣ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 4,51,593 ಪಡಿತರ ಚೀಟಿಗಳಿವೆ. ಅಂತ್ಯೋದಯ ಅನ್ನ ಯೋಜನೆಯಡಿ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಒಟ್ಟು 23,011 ಕುಟುಂಬಗಳು ಪಡಿತರ ಚೀಟಿ ಹೊಂದಿವೆ. 1,14,432 ಅಂತ್ಯೋದಯ ಫಲಾನುಭವಿಗಳು ಉಚಿತ ಪಡಿತರ ಪಡೆಯುತ್ತಿದ್ದಾರೆ. ಅವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ತಿಂಗಳು ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.
ಆರ್ಥಿಕವಾಗಿ ಬಡತನದ ರೇಖೆಗಿಂತ ಕೆಳಗಿರುವ ಒಟ್ಟು 2,54,851 ಕುಟುಂಬಗಳಿದ್ದು, ಅವುಗಳಿಗೆ ಆದ್ಯತಾ ಪಡಿತರ ಚೀಟಿ ನೀಡಲಾಗಿದೆ. ಇವುಗಳಲ್ಲಿ ಒಟ್ಟು 10,16,210 ಫಲಾನುಭವಿಗಳಿದ್ದು, ಪ್ರತಿ ಫಲಾನುಭವಿಗೆ ಮಾಸಿಕ 5ಕೆ.ಜಿ.ಯಂತೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಮೇಲಿನ (ಎಪಿಎಲ್) 1,73,731 ಕುಟುಂಬಗಳು ಆದ್ಯತೇತರ ಪಡಿತರ ಚೀಟಿಗಳನ್ನು ಪಡೆದಿವೆ. ಇವುಗಳಲ್ಲಿ ಪಡಿತರ ಪಡೆಯಲು ಇಚ್ಛಿಸಿರುವ ಒಟ್ಟು 1,10,512 ಪಡಿತರ ಚೀಟಿಗಳಲ್ಲಿ ಏಕ ಸದಸ್ಯ ಪಡಿತರ ಚೀಟಿಗಳಿಗೆ 5 ಕೆ.ಜಿ. ಹಾಗೂ ಬಹುಸದಸ್ಯ ಪಡಿತರ ಚೀಟಿಗಳಿಗೆ 10 ಕೆ.ಜಿಯಂತೆ, ಕೆ.ಜಿ.ಯೊಂದಕ್ಕೆ ₹ 15ರ ದರದಲ್ಲಿ ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸೇರಿದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಒಟ್ಟು 168 ಹಾಸ್ಟೆಲ್‌ಗಳಲ್ಲಿರುವ 15,143 ನಿವಾಸಿಗಳಿಗೆ ಪ್ರತಿ ನಿವಾಸಿಗೆ 10 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಗೋಧಿಯನ್ನು ಪ್ರತಿ ತಿಂಗಳು ಆಹಾರ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.