ADVERTISEMENT

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಆಗ್ರಹ

ಕಾನೂನು ಹೋರಾಟಕ್ಕೆ ಸಮಾನ ಮನಸ್ಕರ ಗುಂಪಿನ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಮೇ 2022, 11:16 IST
Last Updated 26 ಮೇ 2022, 11:16 IST

ಮಂಗಳೂರು: ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಸ್ವತಂತ್ರ ಹಕ್ಕು ಸಂರಕ್ಷಣಾ ಅಧಿನಿಯಮ-2021 ಮತಾಂತರ ನಿಷೇಧ ಕಾಯ್ದೆಯು ವ್ಯಾಪಕ ದೋಷಗಳಿಂದ ಕೂಡಿದೆ. ಇದರ ಉದ್ದೇಶ ನಿರ್ದಿಷ್ಟ ಸಮುದಾಯ ಹಾಗೂ ಸೇವಾ ಸಂಸ್ಥೆಗಳಿಗೆ ಕಿರುಕುಳ ನೀಡುವಂತೆ ತೋರುತ್ತಿದೆ. ಹೀಗಾಗಿ ಕಾನೂನನ್ನು ಸರ್ಕಾರ ಹಿಂಪಡೆದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಎಂದು ಮಂಗಳೂರಿನ ಸಮಾನ ಮನಸ್ಕರ ಗುಂಪು ಆಗ್ರಹಿಸಿದೆ.

ಸಂಘಟನೆ ಪರವಾಗಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, ‘ಈ ಹೊಸ ಕಾಯ್ದೆಯ ಪ್ರಕಾರ ಶಿಕ್ಷಣ, ಆರೋಗ್ಯ, ಸೇವೆಯ ಹೆಸರಿನಲ್ಲಿ ಆಮಿಷ ತೋರಿ ಮತಾಂತರ ಮಾಡಬಾರದು ಎಂದಿದೆ. ರಾಜ್ಯದಲ್ಲಿ ವಿವಿಧ ಧರ್ಮಗಳ ಸಾವಿರಾರು ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅನಾಥಾಶ್ರಮ, ವೃದ್ಧಾಶ್ರಮಗಳು ಉಚಿತ ಸೇವೆ ನೀಡುತ್ತಿವೆ. ಕೆಲವು ಸಂಸ್ಥೆಗಳು ಶಿಕ್ಷಣ ಶುಲ್ಕದಲ್ಲಿ ಬಡವರಿಗೆ ರಿಯಾಯಿತಿ, ಉಚಿತ ಆರೋಗ್ಯ ಸೇವೆ ಮಾಡುತ್ತಿವೆ. ಹೀಗೆ ಸಹಾಯ ಮಾಡಿದರೂ, ಈ ಕಾಯ್ದೆ ಅಡಿಯಲ್ಲಿ ಮತಾಂತರ ಆರೋಪದಲ್ಲಿ ದೂರು ನೀಡಬಹುದಾಗಿದೆ. ಇದು ಬಿಜೆಪಿ ಸರ್ಕಾರದ ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ತಂತ್ರವಾಗಿದೆ’ ಎಂದು ಆರೋಪಿಸಿದರು.

ಈ ಕಾನೂನು ಅನುಷ್ಠಾನಗೊಂಡರೆ, ನಿರ್ದಿಷ್ಟ ಸಂಸ್ಥೆಯ ಮೇಲೆ ದ್ವೇಷ, ಅಸೂಯೆ ಅಥವಾ ರಾಜಕೀಯ ಭಿನ್ನಾಭಿಪ್ರಾಯದಿಂದ ಉಚಿತ ಸೇವೆಯನ್ನೇ ಆಮಿಷವೆಂದೂ ಬಿಂಬಿಸಿ, ಮತಾಂತರ ಯತ್ನ ಎಂದು ದೂರು ನೀಡಬಹುದಾಗಿದೆ. ಸೇವೆಯ ದೃಷ್ಟಿಯಿಂದ ಕಾರ್ಯ ಮಾಡುವ ಸಂಸ್ಥೆಗಳು, ಹಿಂದೇಟು ಹಾಕಿದರೆ, ಎಲ್ಲ ಸಮುದಾಯಗಳ ಬಡವರು, ನಿರ್ಗತಿಕರಿಗೆ ಅನ್ಯಾಯವಾಗುತ್ತದೆ. ಇಂತಹ ಕಾನೂನನ್ನು ಜಾರಿ ಮಾಡಿ ಬಡವರು ಶಿಕ್ಷಣ, ಆರೋಗ್ಯ ಹಾಗೂ ಇತರ ಸಹಾಯ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಇದಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಈ ಕಾನೂನಿನಲ್ಲಿ ಮತಾಂತರಕ್ಕೆ ಅವಕಾಶ ಇಲ್ಲ ಎನ್ನಲಾಗಿದ್ದು ಮರು ಮತಾಂತರಕ್ಕೆ ಅವಕಾಶ ನೀಡಿರುವುದು ಖೇದಕರ’ ಎಂದರು.

ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ವಕೀಲ ಕಳ್ಳಿಗೆ ತಾರನಾಥ ಶೆಟ್ಟಿ, ಪ್ರಮುಖರಾದ ಹೊನ್ನಯ್ಯ, ಮುಹಮ್ಮದ್, ಸವದ್, ಪ್ರಕಾಶ್ ಸಾಲಿಯಾನ್, ವಿಶ್ವಾಸ್ ಕುಮಾರ್ ದಾಸ್, ಪ್ರೇಮ್, ರಮಾನಂದ ಪೂಜಾರಿ, ಟಿ.ಕೆ. ಸುಧೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.