ADVERTISEMENT

ಮಾದಕ ವಸ್ತು ಪಟ್ಟಿಯಿಂದ ಅಡಿಕೆ ಹೊರಕ್ಕೆ: ಕ್ಯಾಂಪ್ಕೊ ಮನವಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 13:40 IST
Last Updated 29 ಜನವರಿ 2021, 13:40 IST

ಮಂಗಳೂರು: ರಾಜ್ಯ ಸರ್ಕಾರದ ಕೃಷಿ ಮಾಹಿತಿ ಜಾಲತಾಣದಲ್ಲಿ ಕೃಷಿ ಉತ್ಪನ್ನಗಳ ದರವನ್ನು ಪ್ರಕಟಿಸುವ ವ್ಯವಸ್ಥೆ ಅಡಿಯಲ್ಲಿ ಅಡಿಕೆಯನ್ನು ಮಾದಕ ವಸ್ತು ಎಂಬುದಾಗಿ ಪರಿಗಣಿಸಿರುವುದು ಕೃಷಿಕರ ವಲಯಕ್ಕೆ ಆಘಾತ ತಂದಿದೆ. ಪುರಾಣಗಳಲ್ಲಿ ಉಲ್ಲೇಖವಿರುವ ಅಡಿಕೆ ಬಗ್ಗೆ ಸರ್ಕಾರದ ಈ ನಿಲುವು ತೋರಿರುವುದು ಸರಿಯಲ್ಲ ಎಂದು ಕ್ಯಾಂಪ್ಕೊ ಆಕ್ಷೇಪಿಸಿದೆ.

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಹಯೋಗದಲ್ಲಿ ಕ್ಯಾಂಪ್ಕೊ, ಸಂಶೋಧನಾ ಸಂಸ್ಥೆಗಳ ಮೂಲಕ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಈಚಿನ ಅಧ್ಯಯನವೊಂದು ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಗುಣಗಳಿಲ್ಲ ಎಂದು ತಿಳಿಸಿರುವುದನ್ನು, ಕಾಸರಗೋಡಿನ ಸಿಪಿಸಿಆರ್‌ಐನ ವೈಜ್ಞಾನಿಕ ಜರ್ನಲ್ ಪ್ರಕಟಿಸಿದೆ.

ಸರ್ಕಾರಿ ವ್ಯವಸ್ಥೆಯಲ್ಲಿ ಆಗಿರುವ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಜಾಲತಾಣದಲ್ಲಿನ ದರಪಟ್ಟಿಯಲ್ಲಿ ಬದಲಾವಣೆ ಮಾಡಿ, ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಧಿಕಾರದ ಅನುಸೂಚಿಯ ಪ್ರಕಾರ ಅಡಿಕೆಯನ್ನು ‘ಒಣಹಣ್ಣು ಮತ್ತು ಬೀಜಗಳು’ ಎಂದು ನಮೂದಿಸಲು ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಗಮನಸೆಳೆಯಲಾಗಿತ್ತು. ಈ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದು, ಅಡಿಕೆಯನ್ನು ತೋಟಗಾರಿಕಾ ಉತ್ಪನ್ನ ಎಂದು ಪರಿಗಣಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.