
ಮಂಗಳೂರು: ಅಡಿಕೆ ಬಳಕೆ ಮತ್ತು ಅದರ ನೀತಿ ಪರಿಣಾಮಗಳ ಕುರಿತು ಇದೇ 30ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ನಡೆಯುವ ‘ಅಡಿಕೆ ಸವಾಲು: ಆಗ್ನೇಯ ಏಷ್ಯಾದಲ್ಲಿ ನೀತಿಯನ್ನು ಪ್ರಭಾವವಾಗಿ ಪರಿವರ್ತಿಸುವುದು’ ಕುರಿತ ವೆಬಿನಾರ್ ಪೂರ್ವಭಾವಿಯಾಗಿ ವಿಜ್ಞಾನಿಗಳು, ಸಂಶೋಧಕರು, ಸಹಕಾರ ಕ್ಷೇತ್ರದ ನಾಯಕರು ಹಾಗೂ ಅಡಿಕೆ ಬೆಳೆಗಾರರನ್ನು ಒಳಗೊಂಡು ಪೂರ್ವಭಾವಿ ಸಭೆ ನಡೆಯಿತು.
ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ವಹಿಸಿದ್ದರು. ಅಡಿಕೆಯ ಪ್ರಸ್ತುತ ವರ್ಗೀಕರಣ, ಅದರ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಕೃಷಿ ಮಹತ್ವಗಳ ಬಗ್ಗೆ ಚರ್ಚೆ ನಡೆಯಿತು. ಅಡಿಕೆಯನ್ನು ಕ್ಯಾನ್ಸರ್‌ಕಾರಕ ಗುಂಪು –1 ಎಂದು ಪರಿಗಣಿಸಿರುವುದರ ಕುರಿತು ಆಕ್ಷೇಪ, ಅಡಿಕೆ ಮಾತ್ರವೇ ಕ್ಯಾನ್ಸರ್‌ಕಾರಕವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕೇಂದ್ರ ಸರ್ಕಾರದ ನೆರವಿನಿಂದ ಸಿಪಿಸಿಆರ್‌ಐ ಸೇರಿದಂತೆ 11 ರಾಷ್ಟ್ರೀಯ ಸಂಸ್ಥೆಗಳ ಮೂಲಕ ಸಮಗ್ರ ಮತ್ತು ನಿರ್ಣಾಯಕ ವೈಜ್ಞಾನಿಕ ಅಧ್ಯಯನ ಪೂರ್ಣಗೊಳ್ಳುವವರೆಗೂ, ಅಡಿಕೆಯನ್ನು ಗುಂಪು –1ರ ವರ್ಗೀಕರಣದಿಂದ ಗುಂಪು 2ಕ್ಕೆ ಮರುವರ್ಗೀಕರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಡಿಕೆ ಪುಡಿ, ಪಾನ್ ಮಸಾಲಾ ಮತ್ತು ಇತರ ಮಿಶ್ರಿತ ಉತ್ಪನ್ನಗಳನ್ನು ಕ್ಯಾನ್ಸರ್‌ಕಾರಕವೆಂದು ಗುರುತಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಅಡಿಕೆ ಒಂದರ ಬಗ್ಗೆ ವಿಶೇಷ ಸಂಶೋಧನೆ ನಡೆಸಿದೆಯೇ ಎಂಬ ಸಂದೇಹ ನಿವಾರಿಸಬೇಕು ಎಂದು ಒತ್ತಾಯಿಸಲಾಯಿತು.
ಸಿಪಿಸಿಆರ್‌ಐ ನಿರ್ದೇಶಕ ಬಾಲಚಂದ್ರ ಹೆಬ್ಬಾರ್, ವಿಜ್ಞಾನಿ ರಮೇಶ್, ಟಿಎಸ್ಎಸ್ ಸಂಸ್ಥೆಯ ಕೇಶವ ಕೊರ್ಸೆ, ರಾಮಯ್ಯ ವಿಶ್ವವಿದ್ಯಾಲಯದ ರಾಜಾ ಹಾಗೂ ಕದಂಬಿ, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್, ಕ್ಯಾಂಪ್ಕೊ ನಿರ್ದೇಶಕ ವಿಶ್ವನಾಥ ಇ. ಹೆಗಡೆ ಆನ್‌ಲೈನ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸತ್ಯನಾರಾಯಣ, ಕೃಷಿ ಮಾರುಕಟ್ಟೆ ತಜ್ಞ ವಿಘ್ನೇಶ್ವರ ಭಟ್ ವರ್ಮುಡಿ, ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್, ಎಆರ್‌ಡಿಎಫ್ ಕಾರ್ಯನಿರ್ವಹಣಾಧಿಕಾರಿ ಕೇಶವ ಭಟ್, ದಂತ ವೈದ್ಯ ಡಾ.ಪ್ರಕಾಶ್, ವಿವೇಕಾನಂದ ಆಯುರ್ವೇದ ಸಂಸ್ಥೆಯ ಡಾ.ಗುರುರಾಜ್, ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.