ADVERTISEMENT

ಅಡಿಕೆ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ವಂಚನೆ

ಸೆನ್‌ ಅಪರಾಧ ಠಾಣೆಯಲ್ಲಿ ಮತ್ತೆ ಏಳು ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 20:46 IST
Last Updated 22 ಜುಲೈ 2024, 20:46 IST

ಮಂಗಳೂರು: ನಗರದ ಅಡಿಕೆ ವರ್ತಕರನೇಕರಿಗೆ ಪರ ರಾಜ್ಯದ ಅಡಿಕೆ ವ್ಯಾಪಾರ ಕಂಪನಿಗಳು  ಕೋಟ್ಯಂತರ ರೂಪಾಯಿ ವಂಚಿಸಿರುವ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.

ಪರ್ಲೀನ್‌ ಟ್ರೇಡಿಂಗ್ ಕಂಪನಿಯು ಇಲ್ಲಿನ ವರ್ತಕರಿಗೆ ಒಟ್ಟು ₹ 1.34 ಕೋಟಿ ಹಾಗೂವಿಮಲ್‌ ಬ್ರದರ್ಸ್‌ ಕಂಪನಿಯು ಒಟ್ಟು ₹ 1.21 ಲಕ್ಷ ವಂಚನೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಪರ್ಲೀನ್‌ ಟ್ರೇಡಿಂಗ್ ಕಂಪನಿಯ ಕಪಿಲ್‌ ಮಟ್ಟಾನಿ 2023ರ ಮಾರ್ಚ್‌ 29ರಂದು 61 ಚೀಲ ಒಣ ಅಡಿಕೆ ಖರೀದಿಸಿ ಹಣ ಪಾವತಿಸಿದ್ದರು. ನಂತರ ಆ ನಂಬಿಕೆಯ ಮೇಲೆ 2024ರ ಮೇ 17ರಂದು ಜೂನ್ 10ರವರೆಗೆ ಬೇರೆ ಬೇರೆ ದಿನ ಅಡಿಕೆ ಒಯ್ದಿದ್ದು, ಒಟ್ಟು ₹ 85.47 ಲಕ್ಷ ಮೊತ್ತವನ್ನು ಬಾಕಿ ಇರಿಸಿದ್ದಾರೆ. ಪರ್ಲೀನ್‌ ಕಂಪನಿಯ ಕಪಿಲ್ ಮಟ್ಟಾನಿ ಮತ್ತು ಕಮಲ್ ಮಟ್ಟಾನಿ ಅವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು  ರೇಯಾಂಶ್‌ ಟ್ರೇಡರ್ಸ್‌ ಕಂಪನಿಯ ಮಾಲೀಕ ರಾಹುಲ್‌ ಗುಪ್ತ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ಪರ್ಲೀನ್‌ ಟ್ರೇಡಿಂಗ್ ಕಂಪನಿಯಿಂದ ₹ 11.26 ಲಕ್ಷ ವಂಚನೆ ಆಗಿದೆ ಎಂದು ಶ್ರೀಶಕ್ತಿ ಟ್ರೇಡಿಂಗ್ ಕಂಪನಿಯ ಅಮೀರ್ ಶರ್ಮ  ಹಾಗೂ ₹ 35.04 ಲಕ್ಷ ವಂಚನೆ ಆಗಿದೆ ಎಂದು ತ್ರಿದೇವ್‌ ಆ್ಯಂಡ್‌ ಕೋ ಕಂಪನಿಯ ವಿನಯ್ ಶರ್ಮ ಹಾಗೂ ₹ 2.94 ಲಕ್ಷ ವಂಚನೆಯಾಗಿದೆ ಎಂದು ಶ್ರೀಸಿದ್ಧಿ ವಿನಾಯಕ ಟ್ರೇಡರ್ಸ್ ಕಂಪನಿಯ ಮಾಲೀಕ ಸಿದ್ಧಾರ್ಥ ಶರ್ಮ ದೂರು ನೀಡಿದ್ದಾರೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಿಮಲ್‌ ಬ್ರದರ್ಸ್‌ ಕಂಪನಿಯ ಮಾಲೀಕರಾದ ಕಮಲೇಶ್‌ ಪಡಾಲಿಯಾ ಮತ್ತು ಆತನ ಪತ್ನಿ ರೋಹಿಣಿ ಸೇರಿ ₹ 59.62 ಲಕ್ಷ ವಂಚಿಸಿದ್ದಾರೆ. ಆರೋಪಿಗಳು ತಮ್ಮ ಕಂಪನಿಯನ್ನು ಮುಚ್ಚಿ ಅದರಲ್ಲಿದ್ದ 115 ಚೀಲ ಅಡಿಕೆಯನ್ನು ಸಂಬಂಧಿಕರ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ಈ ಕರೆ ಮಾಡಿದರೆ ಫೋನ್ ಸ್ವಿಚ‌ಡ್‌ ಆಫ್ ಎಂದು ಪ್ರತಿಕ್ರಿಯೆ ಬರುತ್ತಿದೆ’ ಎಂದು ಹಬೀಬ್‌ ರಹಿಮಾನ್ ಕೆ. ಅವರು ದೂರು ನೀಡಿದ್ದಾರೆ. 

ವಿಮಲ್ ಬ್ರದರ್ಸ್‌ ಕಂಪನಿಯು ಒಟ್ಟು ₹ 25.25 ಲಕ್ಷ ವಂಚಿಸಿದೆ ಎಂದು ಎಸ್‌.ಆರ್‌.ಟ್ರೇಡಿಂಗ್‌ ಕಂಪನಿಯ ಪಾಲುದಾರ ಶ್ರೀಪತಿ ಮತ್ತು ಕೆ.ಎಸ್‌.ನಾರಾಯಣ ಭಟ್‌, ₹ 36.39 ಲಕ್ಷ ವಂಚಿಸಿದೆ ಎಂದು ಎ.ಎ.ಸುಪಾರಿ ಟ್ರೇಡಿಂಗ್ ಕಂಪನಿಯ ಅಬ್ದುಲ್ ರಹಿಮಾನ್‌ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಡಿಕೆ ಖರೀಸಿದ್ದ ಗುಜರಾತಿನ ವರ್ತಕ  ಕಮಲೇಶ್ ಪಡಾಲಿಯಾ ₹8.99 ಲಕ್ಷ ಹಣವನ್ನು ನೀಡದೇ ವಂಚಿಸಿದ ಬಗ್ಗೆ ಬೀಬಿ ಅಲಾಬಿ ರಸ್ತೆಯ ಒಣ ಅಡಿಕೆ ವ್ಯಾಪಾರಿ ಯೂಸುಫ್ ವಾರದ ಹಿಂದೆ ದೂರುನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.