ADVERTISEMENT

ಮಂಗಳೂರು | ಕೊಳೆರೋಗ: ಶೇ 50ರಷ್ಟು ಬೆಳೆ ಹಾನಿ

ಪರಿಹಾರಕ್ಕೆ ಅಡಿಕೆ ಬೆಳೆಗಾರರ ಸಂಘದ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:07 IST
Last Updated 20 ಆಗಸ್ಟ್ 2025, 4:07 IST
ಅಡಿಕೆ ಮರಕ್ಕೆ ಬೋರ್ಡೊ ಸಿಂಪಡಣೆ (ಸಾಂದರ್ಭಿಕ ಚಿತ್ರ)
ಅಡಿಕೆ ಮರಕ್ಕೆ ಬೋರ್ಡೊ ಸಿಂಪಡಣೆ (ಸಾಂದರ್ಭಿಕ ಚಿತ್ರ)   

ಮಂಗಳೂರು: ಈ ಬಾರಿ ಅಧಿಕ ಮಳೆ, ಕೊಳೆರೋಗದಿಂದ ಶೇ 50ಕ್ಕಿಂತ ಅಧಿಕ ಅಡಿಕೆ ನಷ್ಟವಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.

ಸಂಘವು ಈ ಬಗ್ಗೆ ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸಿತ್ತು. ದಕ್ಷಿಣ ಕನ್ನಡ , ಉಡುಪಿ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಕೃಷಿಕರು ಕೊಳೆರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು 503 ಕೃಷಿಕರ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಮಾಹಿತಿ ಪ್ರಕಾರ, ಶೇ 95 ಕೃಷಿಕರ ಅಡಿಕೆ ತೋಟದಲ್ಲಿ ಕೊಳೆರೋಗ ಕಂಡು ಬಂದಿದ್ದು ಶೇ 50ಕ್ಕಿಂತ ಅಧಿಕ ಬೆಳೆ ನಷ್ಟವಾಗಿದೆ ಎಂದು ಸಂಘ ತಿಳಿಸಿದೆ.

ಮಳೆಯ ಕಾರಣದಿಂದ ಶೇ 84ರಷ್ಟು ಕೃಷಿಕರಿಗೆ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ. ಶೇ 47ರಷ್ಟು ಕೃಷಿಕರಿಗೆ ಒಂದು ಬಾರಿ ಔಷಧ ಸಿಂಪಡಣೆ ಸಾಧ್ಯವಾಗಿದೆ. ಶೇ 40ರಷ್ಟು ಜನರು ಎರಡು ಬಾರಿ ಔಷಧ ಸಿಂಪಡಣೆ ಮಾಡಿದ್ದಾರೆ. ಬಹುತೇಕ ಕೃಷಿಕರು ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊ ಸಿಂಪಡಣೆ ಮಾಡಿದ್ದಾರೆ. ಶೇ 20ರಷ್ಟು ಮಂದಿ ಬೋರ್ಡೊ ಜೊತೆ ಈ ಬಾರಿ ಮೆಟಲಾಕ್ಸಿಲ್‌ ಸಿಂಪಡಣೆ ಮಾಡಿದ್ದಾರೆ.  ಬೇಸಿಗೆಯಲ್ಲಿ ಶೇ 49ರಷ್ಟು ಮಂದಿ ಅಡಿಕೆ ಕಾಯಿಗೆ ಔಷಧ ಸಿಂಪಡಣೆ ಮಾಡಿದ್ದಾರೆ. ಅಂತಹವರ ತೋಟದಲ್ಲಿ ಕೂಡ ಕೊಳೆರೋಗ ಬಾಧಿಸಿದೆ. ಶೇ 59ರಷ್ಟು ಕೃಷಿಕರು ತೋಟಗಾರಿಕಾ ಇಲಾಖೆಯ ಮಾಹಿತಿ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ADVERTISEMENT

ಬೆಳೆಗಾರರ ಹಿತ ಕಾಪಾಡಲು ದಕ್ಷಿಣ ಕನ್ನಡ ಹಾಗೂ ಅಡಿಕೆ ಬೆಳೆಯುವ ಪ್ರದೇಶದ ಶಾಸಕರು, ಸಂಸದರು ಅಡಿಕೆ ಬೆಳೆಗಾರರ ಧ್ವನಿಯಾಗಬೇಕು ಎಂದು ಸಂಘವು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.