ADVERTISEMENT

ವಾರದಲ್ಲಿ ಅಡಿಕೆಗೆ ದಾಖಲೆಯ ಬೆಲೆ

ಹಬ್ಬದ ಸಂದರ್ಭದಲ್ಲಿ ಬೆಳೆಗಾರರಿಗೆ ಕ್ಯಾಂಪ್ಕೊ ಕೊಡುಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:40 IST
Last Updated 17 ಅಕ್ಟೋಬರ್ 2020, 5:40 IST
   

ಮಂಗಳೂರು: ಅಡಿಕೆ ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆಯಾಗುತ್ತಿದ್ದು, ಹೊಸ ಅಡಿಕೆ, ಹಳೆಯ ಅಡಿಕೆ, ಡಬಲ್‌ ಚೋಲ್‌ ಅಡಿಕೆ ಧಾರಣೆಯಲ್ಲೂ ಹೆಚ್ಚಳ ಕಂಡು ಬಂದಿದೆ.

ಶುಕ್ರವಾರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹ 330, ಹಳೆಯ ಅಡಿಕೆ ₹ 400, ಡಬಲ್‌ ಚೋಲ್‌ ₹410 ಕ್ಕೆ ಏರಿಕೆಯಾಗಿದೆ. ಗುರುವಾರ ಹೊಸ ಅಡಿಕೆಗೆ ₹ 300, ಹಳೆಯ ಅಡಿಕೆಗೆ ₹ 383 ಹಾಗೂ ಡಬಲ್‌ ಚೋಲ್‌ಗೆ ₹400 ಧಾರಣೆ ಇತ್ತು. ಇದುವರೆಗಿನ ದಾಖಲೆಗಳ ಪ್ರಕಾರ ಇಷ್ಟೊಂದು ಪ್ರಮಾಣದಲ್ಲಿ ಅಡಿಕೆ ದರ ಏರಿಕೆ ಆಗಿರುವುದು ಇದೇ ಮೊದಲು ಎಂದು ಅಡಿಕೆ ಬೆಳೆಗಾರರು ಹೇಳುತ್ತಿದ್ದಾರೆ.

ಒಂದು ವಾರದಿಂದ ಖಾಸಗಿ ವಲಯದಲ್ಲೂ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಇದೀಗ ಕ್ಯಾಂಪ್ಕೊ ಕೂಡ ಬೆಲೆ ಏರಿಸಿದ್ದು, ಸಾರ್ವಕಾಲಿಕ ಗರಿಷ್ಠ ಬೆಲೆ ಸಿಕ್ಕಂತಾಗಿದೆ.

ADVERTISEMENT

‘ಈ ವಾರದಲ್ಲಿ ಹೊಸ ಅಡಿಕೆಗೆ ₹40, ಹೊಸ ಡಬಲ್‌ ಚೋಲ್‌ ಅಡಿಕೆಗೆ ₹ 10 ರಷ್ಟು ಹೆಚ್ಚಿನ ಧಾರಣೆಯನ್ನು ಕ್ಯಾಂಪ್ಕೊ ನೀಡಿದೆ. ಶುಕ್ರವಾರ ಮತ್ತೆ ಹೊಸ ಅಡಿಕೆ ಚೋಲ್‌ಗೆ ₹ 15, ಡಬಲ್ ಚೋಲ್‌ಗೆ ₹10 ರಷ್ಟು ಬೆಲೆಯನ್ನು ಕ್ಯಾಂಪ್ಕೊ ಹೆಚ್ಚಿಸಿದೆ. ಈ ರೀತಿಯ ಬೆಲೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹಬ್ಬದ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ಇದೊಂದು ಅದ್ಭುತ ಕೊಡುಗೆ’ ಎಂದು ಅಡಿಕೆ ಬೆಳೆಗಾರ ಚೈತನ್ಯ ಹೇಳಿದ್ದಾರೆ.

‘ಉತ್ತರ ಭಾರತದಲ್ಲಿ ಅಡಿಕೆಯ ಬೇಡಿಕೆ ಹೆಚ್ಚಾಗಿದ್ದು, ಕರಾವಳಿ ಸೇರಿದಂತೆ ವಿವಿಧ ಮೂಲಗಳಿಂದ ಬೇಡಿಕೆಯಷ್ಟು ಅಡಿಕೆ ಪೂರೈಕೆಯಾಗುತ್ತಿಲ್ಲ. ಇದೀಗ ಹೊಸ ಕೊಯ್ಲಿನ ಅಡಿಕೆಯತ್ತಲೇ ಮಾರುಕಟ್ಟೆ ಗಮನ ಹರಿಸಿದೆ. ಆದರೆ, ಹೊಸ ಕೊಯ್ಲಿನ ಅಡಿಕೆ ಒಣಗಲು ಇನ್ನೂ ಕಾಲಾವಕಾಶ ಬೇಕಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹೊಸ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ’ ಎಂದು ವರ್ತಕರು ಹೇಳುತ್ತಿದ್ದಾರೆ.

---

ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಅಡಿಕೆ ಪೂರೈಕೆಯಾಗುತ್ತಿಲ್ಲ. ಹಬ್ಬಗಳು ಬಂದಿರುವುದರಿಂದ ಅಡಿಕೆ ಬೇಡಿಕೆ ಹೆಚ್ಚಾಗಿದೆ. ಅದರಂತೆ ಬೆಲೆಯೂ ಹೆಚ್ಚಾಗಿದೆ.
-ಸತೀಶ್ಚಂದ್ರ,ಕ್ಯಾಂಪ್ಕೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.