ಮಂಗಳೂರು: ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡುತ್ತಿರುವ ಕೃತಕ ಬುದ್ದಿಮತ್ತೆ (ಎಐ) ವಕೀಲರಿಗೆ ಸಾಟಿಯಾಗದು. ವಕೀಲಿ ವೃತ್ತಿಯಲ್ಲಿ ವ್ಯಕ್ತಿ ಸ್ವತಃ ಮಾಡುವ ಕೆಲಸ ಮಾಡಬೇಕಾಗುವ ಅಗತ್ಯವಿದೆ ಎಂದು ತ್ರಿಶೂರ್ ಸರ್ಕಾರಿ ಕಾನೂನು ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಪ್ರೊ.ಸೋನಿಯಾ ಕೆ.ದಾಸ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿಎಂ) ಕಾನೂನು ಕಾಲೇಜು ಮತ್ತು ಮೂಟ್ ಕೋರ್ಟ್ ಸೊಸೈಟಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಕಾನೂನು ಹಬ್ಬ 'ಲೆಕ್ಸ್ ಅಲ್ಟಿಮಾ'ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ನ್ಯಾಯಾಲಯದಲ್ಲಿ ವಕೀಲರ ಬದಲಿಗೆ ಎಐ ಆಧಾರಿತ ಯಂತ್ರ ವಾದ ಮಾಡಲು ಸಾಧ್ಯವಿಲ್ಲ ಎಂದರು.
ವಾದ ಮತ್ತು ಪ್ರತಿವಾದವನ್ನು ಕೇಳಿಯೇ ನ್ಯಾಯಾಧೀಶರು ತೀರ್ಪು ನೀಡಬೇಕಾಗುತ್ತದೆ. ವಕೀಲರಿಗೆ ಪ್ರತಿವಾದಿಯ ಮುಖಭಾವ, ದೇಹಭಾಷೆಯನ್ನು ಗಮನಿಸಿಯೂ ಕೆಲವೊಮ್ಮೆ ತಮ್ಮ ವಾದವನ್ನು ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ. ನ್ಯಾಯಾಧೀಶರ ಮನಸ್ಥಿತಿಯನ್ನು ಅರಿತು ವಾದಿಸುವ ವಕೀಲರೂ ಇದ್ದಾರೆ. ಈ ಎಲ್ಲ ಕಾರಣಗಳಿಂದ ಯಂತ್ರಗಳು ಅಪ್ರಸ್ತುತ ಎಂದು ಅವರು ಹೇಳಿದರು.
ಎಐ ತಂತ್ರಜ್ಞಾನವನ್ನು ವಕೀಲರು ಮಾಹಿತಿ ಸಂಗ್ರಹಿಸಲು ಮತ್ತು ಟಿಪ್ಪಣಿಗಳನ್ನು ಸಿದ್ಧಪಡಿಸಲು ಬಳಸಿಕೊಂಡು ಸಹಾಯಕನಂತೆ ಇರಿಸಿಕೊಳ್ಳಬಹುದೇ ಹೊರತು ತಮ್ಮ ಬದಲಿಗೆ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಸೋನಿಯಾ, ತಾಂತ್ರಿಕವಾಗಿ ಬೆಳವಣಿಗೆ ಸಾಧಿಸುತ್ತಿದ್ದಂತೆ ಸಮಾಜದಲ್ಲಿ ಸಂಬಂಧಗಳು ಹದಗೆಡುತ್ತಿವೆ. ಸಂಬಂಧಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಫೇಸ್‌ಬುಕ್ ಸಂಬಂಧ ಕೆಲವೊಮ್ಮೆ ‘ಫೇಕ್ ಬುಕ್’ ಆಗುವ ಸಾಧ್ಯತೆ ಇದೆ. ಆದ್ದರಿಂದ ನೇರವಾಗಿ ನೆರವಾಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಜೊತೆಯಲ್ಲಿ ಓದುವ ಅಥವಾ ಕೆಲಸ ಮಾಡುವ ವ್ಯಕ್ತಿ ಕೆಲವು ದಿನ ಕಾಣದಿದ್ದಾಗ ವಿಚಾರಿಸುವಷ್ಟು ಸಂವೇದನೆ ಇಲ್ಲದವರು ಅದೇ ವ್ಯಕ್ತಿ ಸಾವಿಗೀಡಾದ ಎಂಬ ಸುದ್ದಿ ಬಂದರೆ ಸಾಮಾಜಿಕ ತಾಣದಲ್ಲಿ ಭಾವಚಿತ್ರದ ಮುಂದೆ ಮೋಂಬತ್ತಿ ಹಚ್ಚಿದ ಚಿತ್ರ ಪೋಸ್ಟ್ ಮಾಡಿ ಅತ್ತು ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಬೆಳಕಿಗೆ ತರಲು ಸಾಕಷ್ಟು ಸ್ಪರ್ಧೆಗಳು ನಡೆಯುತ್ತವೆ. ಆದರೆ ಲೆಕ್ಸ್ ಅಲ್ಟಿಮಾವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುತ್ತದೆ. ಇಂಥ ಸ್ಪರ್ಧೆಯಿಂದ ಗಳಿಸುವ ಅನುಭವ ವೃತ್ತಿಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಅವರು ನುಡಿದರು.
ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾರ್ಥಿ ಕಾರ್ಯದರ್ಶಿ ಶ್ರೀವರ, 3 ದಿನಗಳ ಹಬ್ಬದಲ್ಲಿ 7 ಸ್ಪರ್ಧೆಗಳು ಇವೆ. ಕಾನೂನು ವಿಷಯದ ಬರಹ ಮತ್ತು ಚರ್ಚೆ ಇದರಲ್ಲಿ ಪ್ರಮುಖ ಎಂದರು. ಕಾರ್ಯದರ್ಶಿ ಸತ್ಯಾತ್ಮ ಭಟ್ ಪಾಲ್ಗೊಂಡಿದ್ದರು. ಸುಮಾ ಕೋಗಿಲಗೇರಿ ಸ್ವಾಗತಿಸಿದರು. ಆಯೆಷಾ ಮನಾಲ್ ನಿರೂಪಿಸಿದರು.
ಮೂಟ್ ಕೋರ್ಟ್ ಸೊಸೈಟಿ ಸಹಯೋಗದಲ್ಲಿ ಆಯೋಜನೆಗೊಂಡಿರುವ ಹಬ್ಬ ಮೂರು ದಿನಗಳ ಲೆಕ್ಸ್ ಅಲ್ಟಿಮಾದಲ್ಲಿ ದೇಶದ ವಿವಿಧೆಡೆಯ ವಿದ್ಯಾರ್ಥಿಗಳು ಭಾಗಿ ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ತಾರಾನಾಥ ಅಧ್ಯಕ್ಷತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.