ADVERTISEMENT

ಸುಳ್ಯ: ಹಲ್ಲೆಗೊಳಗಾಗಿದ್ದ ಯುವಕ ಸಾವು

ಪರಿಹಾರಕ್ಕೆ ಆಗ್ರಹಿಸಿ ಕುಟುಂಬಸ್ಥರ ಧರಣಿ: ಸ್ಥಳಕ್ಕೆ ಖಾದರ್ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:48 IST
Last Updated 22 ಜುಲೈ 2022, 5:48 IST
ಮಸೂದ್
ಮಸೂದ್   

ಸುಳ್ಯ: ತಂಡವೊಂದರಿಂದ ಹಲ್ಲೆಗೆ ಒಳಗಾಗಿದ್ದ ಸುಳ್ಯ ತಾಲ್ಲೂಕಿನ ಕಳೆಂಜ ನಿವಾಸಿ ಮಸೂದ್ (21) ಗುರುವಾರ ಮೃತಪಟ್ಟಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಭಿಲಾಷ್‌, ಸುನಿಲ್‌, ಸುಧೀರ್‌, ಶಿವ, ರಂಜಿತ್‌, ಸದಾಶಿವ, ಜಿಮ್‌ ರಂಜಿತ್‌, ಭಾಸ್ಕರ ಬಂಧಿತರು. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್‌ ತಿಂಗಳ ಹಿಂದೆ ಸುಳ್ಯದ ಕಳಂಜಕ್ಕೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಜು. 19ರ ಸಂಜೆ ಸುಧೀರ ಮತ್ತು ಮಸೂದ್‌ ಯಾವುದೋ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದರು. ಮಸೂದ್‌ ಸುಧೀರನಿಗೆ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜಿ ಪಂಚಾಯಿತಿಗೆಂದು ಮಸೂದ್ ಅವರನ್ನು ಕರೆಸಿದ್ದ ವೇಳೆ ಮಾತಿಗೆ ಮಾತು ಬೆಳೆದು ಈ ಎಂಟು ಮಂದಿಯ ತಂಡ ಮಸೂದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಸೂದ್‌ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಧರಣಿ: ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಮುಖಂಡರು ಜಿಲ್ಲಾಡಳಿತ ಪರಿಹಾರ ಘೋಷಿಸುವವರೆಗೂ ಮಯ್ಯತ್ (ಮೃತ ಶರೀರ) ಅನ್ನು ಪಡೆಯುವುದಿಲ್ಲ ಎಂಬುದಾಗಿ ಧರಣಿ ನಡೆಸಿದರು. ಸ್ಥಳಕ್ಕೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿ, ತಹಶೀಲ್ದಾರ್ ಪೋಲಿಸ್ ಇಲಾಖೆಯ ಅಧಿಕಾರಿಗಳು, ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿ ಮಯ್ಯತ್ ಪಡೆದು ಅಂತಿಮ ವಿಧಿ ವಿಧಾನ ನೆರವೇರಿಸುವಂತೆ ವಿನಂತಿಸಿದರು.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದರು. ಈಗಾಗಲೇ ಆಸ್ಪತ್ರೆಯ ಖರ್ಚನ್ನು ಭರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಘೋಷಿಸಬೇಕು ಎಂದು ಖಾದರ್ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.