ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಭಕ್ತಿಪರವಶೆಯಿಂದ ಪುಣ್ಯ ತೀರ್ಥದಲ್ಲಿ ಮಿಂದೆದ್ದರು.
ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಅವಭೃತೋತ್ಸವ ಸವಾರಿ ದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಕ್ಷೇತ್ರ ಪುರೋಹಿತ ಮಧುಸೂಧನ ಕಲ್ಲೂರಾಯ ಇದ್ದರು. ಕ್ಷೇತ್ರದ ಆನೆ ಯಶಸ್ವಿಯು ನೀರಾಟವು ಅವಭೃತೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರ ಗಮನ ಸೆಳೆಯಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್. ಕೆ, ಬ್ರಹ್ಮರಥ ದಾನಿ ಅಜಿತ್ ಶೆಟ್ಟಿ ಕಡಬ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ ಮತ್ತಿತರರು ಭಾಗವಹಿಸಿದ್ದರು.
ಡಿ.12ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಅಂದು ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಗೋಪುರ ನಡಾವಳಿ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.