
ಮಂಗಳೂರು: ಮಹಿಳೆಯರಿಗೆ ಸೌಂದರ್ಯ ಸಲಹೆ, ಹಿರಿಯ ನಾಗರಿಕರಿಗೆ ದೇಹಾರೋಗ್ಯದ ಕಾಳಜಿ, ಹೃದಯ ತಪಾಸಣೆ, ಮಕ್ಕಳಿಗೆ ಮುದ ನೀಡುವ ಆಟಗಳು, ಗಿಡಮೂಲಿಕೆ, ಹೋಮಿಯೊಪತಿ ಔಷಧಿಗಳು, ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವ ಖಾದ್ಯ ಸವಿಯುವ ಭಾಗ್ಯ ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಬೇಕೆಂದರೆ ಆಯುಷ್ ಹಬ್ಬಕ್ಕೆ ಭೇಟಿ ನೀಡಬೇಕು!
ಆಯುಷ್ ಹಬ್ಬ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಆಯುಷ್ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದ ಟಿಎಂಎ ಪೈ ಸಭಾಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಆಯುಷ್ ಹಬ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಪ್ರಾಚೀನ ಋಷಿ ಮುನಿಗಳು ಜಗತ್ತಿನ ಕಲ್ಯಾಣಕ್ಕಾಗಿ ದುಡಿಯಬೇಕಾದ ಆರೋಗ್ಯವಂತ ವ್ಯಕ್ತಿಗಳ ನಿರ್ಮಾಣಕ್ಕೆ ದಾರಿ ತೋರಿದ್ದಾರೆ. ಇಂತಹ ದಾರಿಗಳ ಸಂಯುಕ್ತ ವ್ಯವಸ್ಥೆಯೇ ಆಯುಷ್ ಚಿಕಿತ್ಸಾ ಪದ್ಧತಿ. ನಮ್ಮ ಪೂರ್ವಜರು ನಮಗೆ ಬದುಕುವ ದಾರಿ ನಿರ್ಮಾಣ ಮಾಡಿಕೊಟ್ಟಂತೆ, ನಾವು ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಪ್ಲಾಸ್ಟಿಕ್ ತ್ಯಜಿಸುವ ಬಗ್ಗೆಯೂ ಯೋಚಿಸಬೇಕು’ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ ಸಲ್ಡಾನ ಮಾತನಾಡಿ, ಉತ್ತರ ಆರೋಗ್ಯಕ್ಕೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಅಗತ್ಯವಿದೆ. ವಿಶ್ವದಲ್ಲಿ ಶೇ 40ರಿಂದ ಶೇ 90ರಷ್ಟು ಜನರು ಒಂದಲ್ಲ ಒಂದು ರೀತಿಯಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿ ಅನುಸರಿಸುತ್ತಾರೆ ಎಂದರು.
ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಪ್ರಕೃತಿಯೊಂದಿಗೆ ಬದುಕಲು ಕಲಿಸುವ ತುಳುನಾಡಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮದ್ದೇ ರೋಗಕ್ಕೆ ಕಾರಣವಾಗುತ್ತಿರುವ ಕಾಲದಲ್ಲಿ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗೆ ಮರಳಬಾರದು ಎಂದರು.
ಶಾಸಕ ವೇದವ್ಯಾಸ ಕಾಮತ್, ಮಾಹೆ ವಿವಿಯ ಪ್ರೊ. ಚಾನ್ಸಲರ್ ಎಚ್.ಎಸ್.ಬಲ್ಲಾಳ್, ಬೆಂಗಳೂರು ಎಸ್. ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್. ನಾಗೇಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಕಣಚೂರು ಶಿಕ್ಷಣ ಸಂಸ್ಥೆ ಮುಖ್ಯಸ್ಥ ಕಣಚೂರು ಮೋನು, ಪ್ರಮುಖರಾದ ಪ್ರೊ. ಎಂ.ಬಿ.ಪುರಾಣಿಕ್, ಡಾ. ಪ್ರಸನ್ನ ನರಸಿಂಹ ರಾವ್, ಖಾಲಿದ್, ಮಧು ವಾರಿಯರ್, ಸತ್ಯಮೂರ್ತಿ ಭಟ್, ಡಾ. ಸಚಿನ್ ನಡ್ಕ ಉಪಸ್ಥಿತರಿದ್ದರು. ಆಯುಷ್ ಹಬ್ಬ ಸಮಿತಿ ಅಧ್ಯಕ್ಷ ಡಾ. ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ಡಾ. ಆಶಾಜ್ಯೋತಿ ರೈ ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ಶಂಖನಾದ ಮೊಳಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.