ಮಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಜಾರಿಯಾಗದಿರುವುದರಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು, ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರದಲ್ಲಿ ಅಂತಹ ತಪ್ಪು ಮರುಕಳಿಸದಂತೆ ತಡೆಯಲು ಈಗಲೇ ಸಿದ್ಧತೆ ಆರಂಭಿಸಿದ್ದಾರೆ.
ಈಗ ನಡೆಯುತ್ತಿರುವ ಸಮೀಕ್ಷೆಯ ಅಂಕಿ ಅಂಶಗಳ ಆಧಾರದಲ್ಲೇ ಮೀಸಲಾತಿ ಹಾಗೂ ಸರ್ಕಾರದ ಇನ್ನಿತರ ಸವಲತ್ತುಗಳು ಹಂಚಿಕೆ ಆಗಬೇಕು ಎಂಬುದು ಮುಖಂಡರ ಬೇಡಿಕೆ. ಇದಕ್ಕಾಗಿ ಹಿಂದುಳಿದ ವರ್ಗಗಳಲ್ಲಿಯ ವಿವಿಧ ಜಾತಿಗಳಲ್ಲಿ ಒಗ್ಗಟ್ಟು ಮೂಡಿಸಿ ಒತ್ತಡ ಹೇರಲು ಅವರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇಲ್ಲಿ ಬುಧವಾರ ನಡೆದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡರ ಮೈಸೂರು ವಿಭಾಗ ಮಟ್ಟದ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಯಿತು. ಹಿಂದುಳಿದ ವರ್ಗಗಳ ಎಲ್ಲ ಜಾತಿಯವರೂ ಸೇರಿ ಜಿಲ್ಲಾ ಮಟ್ಟದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
‘ಆಯಾ ಪ್ರದೇಶದಲ್ಲಿ ಪ್ರಬಲವಾಗಿ ರುವ ಹಿಂದುಳಿದ ಜಾತಿಯ ಮುಂದಾಳತ್ವದಲ್ಲಿ ಇತರ ಜಾತಿಗಳ ಸಂಘಟನೆಯನ್ನು ಜಿಲ್ಲಾ ಮಟ್ಟದಲ್ಲಿ ಸಂಘಟಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಬೆಂಗಳೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ಈ ಕುರಿತು ಸಭೆಗಳು ಮುಗಿದ ಬಳಿಕ ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಹಿಂದುಳಿದ ಜಾತಿಗಳ ಮುಖಂಡರು ಒತ್ತಾಯಿಸಿದ್ದಾರೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು, 2018ರಲ್ಲಿ ಜಾರಿಗೆ ಸಿದ್ದರಾಮಯ್ಯ ಅವರು ಒಲವು ತೋರಿದ್ದರೂ ಹೈಕಮಾಂಡ್‌ನಿಂದ ಸಮ್ಮತಿ ಸಿಗಲಿಲ್ಲ. ಆ ಬಳಿಕ ಬಂದ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ, ಬಿಜೆಪಿ ನೇತೃತ್ವದ ಸರ್ಕಾರಗಳು ವರದಿಯನ್ನು ಮೂಲೆಗುಂಪು ಮಾಡಿದ್ದವು. ನಂತರ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗವು ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ, ಅದು ಜಾರಿ ಆಗದಂತೆ ತಡೆಯಲಾಯಿತು. ಆದರೆ, ಈ ಸಲದ ಸಮೀಕ್ಷೆಯ ವರದಿ ಹಾಗೆ ಆಗಲು ಅವಕಾಶ ನೀಡುವುದಿಲ್ಲ. ಸಂವಿಧಾನ ಬದ್ಧ ಹಕ್ಕು ಪಡೆಯಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಪ್ರತಿ ಜಿಲ್ಲೆಯಲ್ಲೂ ಹಿಂದುಳಿದ ವರ್ಗಗಳ ಎಲ್ಲ ಜಾತಿಗಳನ್ನು ಒಳಗೊಂಡ ಸಂಘಟನೆ ಕಟ್ಟುತ್ತೇವೆ. ಉದಾಹರಣೆ ಕರಾವಳಿ ಭಾಗಗಳಲ್ಲಿ ಬಿಲ್ಲವ ಅಥವಾ ಈಡಿಗ ಸಮುದಾಯ ಬಲಿಷ್ಠವಾಗಿದೆ. ಇಲ್ಲಿ ಬಿಲ್ಲವ ಸಮುದಾಯ ನೇತೃತ್ವದಲ್ಲೇ ಇತರ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುತ್ತೇವೆ. ಬೇರೆ ಜಿಲ್ಲೆಗಳಲ್ಲೂ ಅದೇ ರೀತಿ ಸಂಘಟನೆ ರೂಪಿಸುತ್ತೇವೆ. ಹಿಂದುಳಿದ ವರ್ಗದ ಪ್ರಬಲ ಸಮುದಾಯಗಳು ಸಣ್ಣ ಪುಟ್ಟ ಸಮುದಾಯಗಳಿಗೂ ಅವಕಾಶ ಮಾಡಿಕೊಡಬೇಕು ಎಂಬ ನೆಲೆಯಲ್ಲೂ ಸಮಾಲೋಚನೆ ನಡೆದಿದೆ’ ಎಂದು ಇನ್ನೊಬ್ಬ ಮುಖಂಡ ತಿಳಿಸಿದರು.
ಹಿಂದುಳಿದ ವರ್ಗಗಳ ಮೈಸೂರು ವಿಭಾಗದ ಸಮಿತಿಯಲ್ಲಿರುವ ಸಚಿವ ಮಧು ಬಂಗಾರಪ್ಪ, ವಿ.ಆರ್.ಸುದರ್ಶನ್, ರವಿಕುಮಾರ್, ಶಾಸಕರಾದ ಭೀಮಣ್ಣ ನಾಯ್ಕ, ಪ್ರದೀಪ್ ಈಶ್ವರ್, ಬೇಳೂರು ಗೋಪಾಲಕೃಷ್ಣ, ಮುಖಂಡರಾದ ವಿನಯ ಕುಮಾರ್ ಸೊರಕೆ, ಪಿ.ವಿ.ಮೋಹನ್, ಅಶೋಕ್ ಕುಮಾರ್, ಪದ್ಮರಾಜ್ ಆರ್.ಪೂಜಾರಿ, ವಿಶ್ವಾಸದಾಸ್ ಗಾಣಿಗ, ಮಂಜುನಾಥ ಪೂಜಾರಿ, ರಕ್ಷಿತ್ ಶಿವರಾಂ, ಮಮತಾ ಗಟ್ಟಿ, ಕಾಂಗ್ರೆಸ್‌ನ ಒಬಿಸಿ ಜಿಲ್ಲಾ ಘಟಕಗಳ ಅಧ್ಯಕ್ಷರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.