ADVERTISEMENT

Caste Census | ದಕ್ಷಿಣ ಕನ್ನಡ: 1.20 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 6:55 IST
Last Updated 1 ಅಕ್ಟೋಬರ್ 2025, 6:55 IST
   

ಮಂಗಳೂರು:  ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 5.47 ಲಕ್ಷ ಕುಟುಂಬಗಳ ಮಾಹಿತಿ ಕಲೆ ಹಾಕಬೇಕಿದ್ದು, ಮಂಗಳವಾರದವರೆಗೆ 1.20 ಲಕ್ಷ ಕುಟುಂಬಗಳ ಮಾಹಿತಿ ಕಲೆಹಾಕುವ ಕಾರ್ಯ ಪೂರ್ಣಗೊಂಡಿದೆ. 

ಜಿಲ್ಲೆಯಲ್ಲಿ ಸೋಮವಾರದ ವರೆಗೆ ಒಟ್ಟು 80 ಸಾವಿರ ಕುಟುಂಬಗಳ ಮಾಹಿತಿ ಕಲೆಹಾಕುವ ಕಾರ್ಯ ಪೂರ್ಣಗೊಂಡಿತ್ತು. ಮಂಗಳವಾರ ಸುಮಾರು 40 ಸಾವಿರ ಕುಟುಂಬಗಳ ಮಾಹಿತಿ ಕಲೆಹಾಕಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. 

ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲು 4,360 ಸಮೀಕ್ಷೆದಾರರ ಅಗತ್ಯವಿದ್ದು, ಸುಮಾರು 600 ಮಂದಿಯ ಕೊರತೆ ಇದೆ. ಹಾಗಾಗಿ ಶಿಕ್ಷಣ ಇಲಾಖೆ ಅಲ್ಲದೇ, ಬೇರೆ ಇಲಾಖೆಗಳ ಅಧಿಕಾರಿಗಳನ್ನೂ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ಅಧಿಕಾರಿಗಳಿಗೆ, ಯಾವುದೇ ಆದೇಶವನ್ನು ಕಳುಹಿಸದೇ ನೇರವಾಗಿ ಫೋನ್‌ ಕರೆ ಮಾಡಿ, ಮರುದಿನವೇ ಸಮೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ.‌ ತರಬೇತಿಯನ್ನೇ ನೀಡದೇ ಸಮೀಕ್ಷೆ ನಡೆಸುವಂತೆ ಸೂಚಿಸಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಲ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. 

ADVERTISEMENT

‘ಸಮೀಕ್ಷೆದಾರರ ಕೊರತೆ ಇರುವುದರಿಂದ ವಿವಿಧ ಇಲಾಖೆಗಳಲ್ಲಿರುವ ಪದವೀಧರರನ್ನು ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದೇವೆ. ಸಮೀಕ್ಷೆ ಕಾರ್ಯವನ್ನು ಹೇಗೆ ನಡಸಬೇಕೆಂಬುದನ್ನು ಸಮಗ್ರವಾಗಿ ವಿವರಿಸುವ ವಿಡಿಯೊವನ್ನು ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಅವರ ಎಲ್ಲ ಸಂದೇಹಗಳಿಗೂ ಅದರಲ್ಲಿ ಉತ್ತರವಿದೆ. ಫೋನ್‌ ಕರೆ ಮಾಡಿ ಕರೆಸಿಕೊಂಡ ಅಧಿಕಾರಿಗಳು, ಗೊತ್ತುಪಡಿಸಿದ ಕಚೇರಿಗೆ  ಹಾಜರಾದ ತಕ್ಷಣವೇ ಸಮೀಕ್ಷೆ ಕುರಿತ ಆದೇಶ ನೀಡುತ್ತಿದ್ದೇವೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.