ADVERTISEMENT

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ

ಬಾಲ್ಯದಲ್ಲಿ ಬ್ಯಾಡ್ಮಿಂಟನ್‌, ಕಬಡ್ಡಿ, ಆಡಿದ ದಿನಗಳನ್ನು ಮೆಲುಕು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:27 IST
Last Updated 28 ಅಕ್ಟೋಬರ್ 2025, 5:27 IST
ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್’ ಬ್ಯಾಡ್ಮಿಂಟನ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದ ಸಾಧಕರಾದ ಅರುಣ್ ಪೂವಯ್ಯ– ಅಶೋಕ್ ಪೂವಯ್ಯ ಸೋದರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು
ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್’ ಬ್ಯಾಡ್ಮಿಂಟನ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದ ಸಾಧಕರಾದ ಅರುಣ್ ಪೂವಯ್ಯ– ಅಶೋಕ್ ಪೂವಯ್ಯ ಸೋದರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು   

ಮಂಗಳೂರು: ಬ್ಯಾಡ್ಮಿಂಟನ್ ವರ್ಲ್ಡ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಆಶ್ರಯದಲ್ಲಿ ಆಯೋಜಿಸಿರುವ ‘ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೋಮವಾರ ಇಲ್ಲಿ ಚಾಲನೆ ನೀಡಿದರು.

ರ‍್ಯಾಕೆಟ್ ಹಿಡಿದು ಅಂಕಣಕ್ಕೆ ಇಳಿದ ಸಿದ್ದರಾಮಯ್ಯ ಕೆಲವು ಸರ್ವ್‌ಗಳನ್ನು ಮಾಡಿ ಚಪ್ಪಾಳೆ ಗಿಟ್ಟಿಸಿದರು. ಟೂರ್ನಿಯಲ್ಲಿ ಭಾಗವಹಿಸಲು ಬಂದಿರುವ ಆಟಗಾರರನ್ನು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ (ಡಿಕೆಬಿಎ) ಅಧ್ಯಕ್ಷ ಸಂತೋಷ್ ಕುಮಾರ್‌ ಶೆಟ್ಟಿ ಅವರು ಮುಖ್ಯಮಂತ್ರಿಗೆ ಪರಿಚಯಿಸಿದರು. ಆಟಗಾರರನ್ನು ಮಾತನಾಡಿಸಿದ ಮುಖ್ಯಮಂತ್ರಿ, ಅವರ ಕೈ ಕುಲುಕಿ ಶುಭ ಕೋರಿದರು.  

ಭಾರತ ಬ್ಯಾಂಡ್ಮಿಂಟನ್‌ ಸಂಸ್ಥೆ, ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಹಾಗೂ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ಬ್ಯಾಡ್ಮಿಂಟನ್‌ ಆಡಿದ್ದನ್ನು ಮೆಲುಕು ಹಾಕಿದರು. 'ಜಗತ್ತಿನ ಜನಪ್ರಿಯ ಆಟಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಬ್ಯಾಡ್ಮಿಂಟನ್‌, ಕಬಡ್ಡಿ, ಫುಟ್‌ಬಾಲ್‌ ಆಡುತ್ತಿದ್ದೆ. ಯಾವ ಆಟದಲ್ಲೂ ಪರಿಣತಿ ಸಾಧಿಸಿ ಮುಂದೆ ಬರಲಿಲ್ಲ. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡುವ ಅವಕಾಶ ಪಡೆಯಲಿಲ್ಲ’ ಎಂದರು.

ADVERTISEMENT

ಆರೋಗ್ಯ ಕಾಪಾಡುವ ಉದ್ದೇಶದಿಂದ ಬ್ಯಾಡ್ಮಿಂಟನ್‌ ಆಡುವ ಪರಿಪಾಟ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ದೇಶದಲ್ಲಿ ಈ ಕ್ರೀಡೆ ಜನಪ್ರಿಯವಾಗಲು ಕಾರಣರಾದ ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಪಿ‌.ವಿ.ಸಿಂಧು ಅವರಿಗೆ ಮುಖ್ಯಮಂತ್ರಿ ಧನ್ಯವಾದ ಸಲ್ಲಿಸಿದರು. 

‘ಈ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ್ದು ನಾನು.‌ ₹ 35 ಕೋಟಿ ಅಂದಾಜಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಮೊತ್ತವನ್ನು ₹ 20 ಕೋಟಿಗೆ ಇಳಿಸಲಾಯಿತು. ಆ ಹಣವನ್ನೂ ಖರ್ಚು ಮಾಡಿ ಕಾಮಗಾರಿ ಪೂರ್ತಿಗೊಳಿಸಲಿಲ್ಲ. ನಾನು ಮತ್ತೆ ಮುಖ್ಯಮಂತ್ರಿಯಾದ ಬಳಿಕ ಈ ಕ್ರೀಡಾಂಗಣಕ್ಕೆ  ಮತ್ತೆ ₹ 15 ಕೋಟಿ ಬಿಡುಗಡೆ ಮಾಡಿ, ಕಾಮಗಾರಿ ಪೂರ್ತಿಗೊಳಿಸಿದೆವು. ಇಲ್ಲೀ ಈಗ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿದೆ. ಮಂಗಳೂರಿನಲ್ಲಿ ಇಂತಹ ಟೂರ್ನಿ ಆಯೋಜನೆಗೊಂಡಿದ್ದು ಇದೇ ಮೊದಲು. ಇದು ನಮಗೆ ಹೆಮ್ಮೆಯ ವಿಷಯ’ ಎಂದರು.

‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ 2ರಷ್ಟು ಮೀಸಲಾತಿ ನೀಡಲಿದ್ದೇವೆ. ಪೊಲೀಸ್‌ ಇಲಾಖೆಯಲ್ಲಿ ಡಿವೈಎಸ್ಪಿ, ಇನ್‌ಸ್ಪೆಕ್ಟರ್‌, ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ನೇಮಕಾತಿ ವೇಳೆ ಕ್ರೀಡಾ ಕೋಟಕ್ಕೆ ಶೇ 3ರಷ್ಟು ಹುದ್ದೆ ಮೀಸಲಿಡಲಾಗುತ್ತಿದೆ. ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹ 5 ಕೋಟಿ, ಬೆಳ್ಳಿ ಗೆದ್ದರೆ ₹ 3 ಕೋಟಿ ಹಾಗೂ ಕಂಚು ಗೆದ್ದರೆ ₹ 2 ಕೋಟಿ ಬಹುಮಾನ ನೀಡಲಿದ್ದೇವೆ. ಒಲಿಂಪಿಕ್ಸ್‌ಗೆ ತಯಾರಿ ನಡೆಸುವ 60 ಕ್ರೀಡಾಪಟುಗಳಿಗೆ ತಲಾ ₹ 10 ಲಕ್ಷ ನೀಡಲಾಗುತ್ತಿದೆ’ ಎಂದು ತಿಳಿಸಿದರು.  

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಅಜಯ್ ಸಿಂಗ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಶೋಕ್ ಕುಮಾರ ರೈ, ಐವನ್‌ ಡಿಸೋಜ, ಮಂಜುನಾಥ ಭಂಡಾರಿ, ಬೆಂಗಳೂರು ಬಿಜಿನೆಸ್ ಕಾರಿಡಾರ್ ಅಧ್ಯಕ್ಷ ಎಲ್.‌ಕೆ.ಅತೀಕ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ, ಯುವ ಸಬಲೀಕರ‌ಣ ಇಲಾಖೆ‌ ಆಯುಕ್ತ ಚೇತನ್ ಆರ್., ಕರ್ನಾಟಕ‌ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಚಾಲಕ ಎಂ.ಪಿ.ರವೀಂದ್ರ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿವಿಧ ನಿಗಮ ಮಂಡಳಿ ಅಕಾಡೆಮಿಗಳ ಅಧ್ಯಕ್ಷರಾದ ಹರೀಶ್ ಕುಮಾರ್, ಎಂ.ಎ. ಗಫೂರ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್‌, ಜೋಕಿಂ ಸ್ಟ್ಯಾನಿ‌ ಅಲ್ವಾರಿಸ್, ತಾರಾನಾಥ ಗಟ್ಟಿ ಕಾಪಿಕಾಡ್‌, ಉಮರ್ ಯು.ಎಚ್‌., ಲಾವಣ್ಯ ಬಲ್ಲಾಳ್, ಶಾಲೆಟ್‌ ಪಿಂಟೊ, ಟಿ.ಎಂ.ಶಾಹೀದ್, ವಿಶ್ವಾಸ್‌ ಕುಮಾರ್‌ ದಾಸ್, ಡಿಕೆಬಿಎ ಕಾರ್ಯದರ್ಶಿ ಸುಪ್ರೀತ್ ಆಳ್ವ ಮೊದಲಾದವರು ಭಾಗವಹಿಸಿದ್ದರು.   
ಡಿಕೆಬಿಎ ಅಧ್ಯಕ್ಷ ಸಂತೋಷ್ ಕುಮಾರ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
  

ಕ್ರೀಡಾಪಟುಗಳು ಹಾಗೂ ಕ್ರೀಡಾ ಆಸಕ್ತರ ಸಂಖ್ಯೆ ಮಂಗಳೂರಿನಲ್ಲಿ ಜಾಸ್ತಿ ಇದೆ. ಇಲ್ಲಿ ಅತ್ಯುತ್ತಮ ಕ್ರೀಡಾ ಸೌಕರ್ಯ ಕಲ್ಪಿಸುವ ಮೂಲಕ ಈ ನಗರವನ್ನು ಕ್ರೀಡಾ ಕೇಂದ್ರವನ್ನಾಗಿ ರೂಪಿಸುವ ಆಶಯ ಸರ್ಕಾರದ್ದು
ದಿನೇಶ್‌ ಗುಂಡೂರಾವ್‌ ದ.ಕ. ಜಿಲ್ಲಾ ಉಸ್ತುವಾರಿ ಸಚಿವ

ಅರ್ಹತಾ ಪಂದ್ಯಗಳು ಇಂದಿನಿಂದ

’ ಈ ಟೂರ್ನಿಯ ಪುರುಷರ ಸಿಂಗಲ್ಸ್‌ ಡಬಲ್ಸ್‌ ಮಹಿಳೆಯರ ಸಿಂಗಲ್ಸ್‌ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಅರ್ಹತಾ ಸುತ್ತಿನ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿವೆ. ಅದರಲ್ಲಿ ಅರ್ಹತೆ ‍ಪಡೆಯುವ ಆಟಗಾರರು ನೇರವಾಗಿ ಆಯ್ಕೆಯಾದ ಆಟಗಾರರ ಜೊತೆಗೆ ಸೆಣಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.

- ‘ಉತ್ಕಷ್ಟತಾ ಕೇಂದ್ರಕ್ಕೆ 3 ಎಕರೆ ಜಾಗ ಕೊಡಿ’

‘ರಾಷ್ಟ್ರೀಯ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟಗಳಲ್ಲಿ ರಾಜ್ಯದ ಬ್ಯಾಡ್ಮಿಂಟನ್‌ ಪಟುಗಳ  ಪಾರಮ್ಯವಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಕೋಚಿಂಗ್ ಸೆಂಟರ್ ಆರಂಭಿಸಲಿದ್ದೇವೆ. ಅದನ್ನು ಬ್ಯಾಡ್ಮಿಂಟನ್ ಕ್ರೀಡೆಯ ಉತ್ಕೃಷ್ಟತಾ ಕೇಂದ್ರವನ್ನಾಗಿ (ಸೆಂಟರ್ ಆಫ್‌ ಎಕ್ಸೆಲೆನ್ಸ್) ರೂಪಿಸುವ ಉದ್ದೇಶವಿದ್ದು ಅದಕ್ಕೆ ಬೆಂಗಳೂರಿನಲ್ಲಿ 3 ಎಕರೆ ಜಾಗ ಮಂಜೂರು ಮಾಡಬೇಕು’ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಅಧ್ಯಕ್ಷ ಮನೋಜ್ ಕುಮಾರ್ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.