ADVERTISEMENT

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ದುರ್ನಾತದ ಆತಂಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:58 IST
Last Updated 31 ಆಗಸ್ಟ್ 2025, 5:58 IST
00
00   

ಮಂಗಳೂರು: ಹಲವಾರು ಹೆಸರಾಂತ ಕೈಗಾರಿಕೆಗಳು ಇದುವ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಒಂದು ಭಾಗದ ಜನರು ಮತ್ತೊಮ್ಮೆ ದುರ್ವಾಸನೆ ಸಹಿಸಬೇಕಾದ ದಿನಗಳು ಹತ್ತಿರ ಇವೆಯೋ ಎಂಬ ಆತಂಕದಲ್ಲಿದ್ದಾರೆ. ಇಲ್ಲಿ ಕೋಳಿ ಆಹಾರ ತಯಾರಿ ಘಟಕ ಆರಂಭಿಸುವ ಪ್ರಯತ್ನ ನಡೆಯುತ್ತಿರುವುದೇ ಇದಕ್ಕೆ ಕಾರಣ. 

‘ಕೈಗಾರಿಕಾ ಪ್ರದೇಶದಲ್ಲಿ ಈ ಹಿಂದೆ ಕೋಳಿ ಆಹಾರ ತಯಾರಿ ಘಟಕ ಇತ್ತು. ಅಲ್ಲಿಂದ ಹೊರಸೂಸುವ ದುರ್ನಾತ ಇಡೀ ಪ್ರದೇಶವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಮೀಪದ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಕಾರ್ಮಿಕರು ಒದ್ದಾಡಿದ್ದರು. ಸ್ವಲ್ಪ ದೂರದಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ಕಿಟಕಿ ಬಾಗಿಲು ಮುಚ್ಚಿ ಕುಳಿತರೂ ನೆಮ್ಮದಿ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊನೆಗೇ ಪೊಲೀಸ್ ಅಧಿಕಾರಿಗಳೇ ಬಂದು ಪರಿಶೀಲಿಸಿದರು. ಆ ನಂತರ ಏನಾಯಿತೋ ಏನೋ, ಫ್ಯಾಕ್ಟರಿ ಮುಚ್ಚಿತು’ ಎಂದು ಆಗ ತೊಂದರೆ ಅನುಭವಿಸಿದವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಮತ್ತೊಬ್ಬರು ಕಟ್ಟಡವನ್ನು ಬಾಡಿಗೆಗೆ ಪಡೆದು ಫ್ಯಾಕ್ಟರಿ ಆರಂಭಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಕಟ್ಟಡದಲ್ಲಿ ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿರುವುದೂ ಗಮನಕ್ಕೆ ಬಂದಿದೆ. ಫ್ಯಾಕ್ಟರಿ ಶುರುವಾದರೆ ಇನ್ನು ಏನೇನು ಕಾದಿದೆಯೋ. ಸಂಬಂಧಪಟ್ಟವರು ಈಗಲೆ ಎಚ್ಚೆತ್ತುಕೊಂಡರೆ ಒಳಿತು. ಇಲ್ಲವಾದರೆ ಇಲ್ಲಿ ಮತ್ತೆ ದುರ್ನಾತ ತಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ’ ಎಂದು ಹಿಂದೆ ಸಂಕಷ್ಟಕ್ಕೆ ಈಡಾಗಿದ್ದವರು ಹೇಳಿದರು. 

ADVERTISEMENT

‘ಕೋಳಿ ಆಹಾರ ತಯಾರಿಸಲೆಂದು ತ್ಯಾಜ್ಯವನ್ನು ತರಲಾಗುತ್ತಿತ್ತು. ಅದರ ದುರ್ನಾತವೇ ವಿಪರೀತ. ಅದನ್ನು ಬಾಯ್ಲರ್‌ಗೆ ಹಾಕಿ ಸಂಸ್ಕರಿಸಿ ಪುಡಿ ತಯಾರಿಸುವಾಗ ದುರ್ವಾಸನೆ ಅಸಹನೀಯವಾಗುತ್ತಿತ್ತು. ಕೆಲವು ಸಮಯದ ನಂತರ ಕೆಲವರೆಲ್ಲ ಒಟ್ಟುಗೂಡಿ ಪ್ರತಿಭಟಿಸಿದೆವು. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿತು. ಈಗ ಅಂಥಹುದೇ ಕೈಗಾರಿಕೆಯನ್ನು ಆರಂಭಿಸುವುದಾದರೆ ಮತ್ತೆ ಬೀದಿಗೆ ಇಳಿಯಬೇಕಾದೀತು’ ಎಂದು ಉದ್ಯಮಿಯೊಬ್ಬರು ತಿಳಿಸಿದರು. 

‘ಫ್ಯಾಕ್ಟರಿ ಇದ್ದಾಗ ಇಲ್ಲಿ ಎರಡು–ಮೂರು ತಾಸು ಇರುವುದು ಕೂಡ ಕಷ್ಟವಾಗುತ್ತಿತ್ತು. ದುರ್ವಾಸನೆಯ ಸಮಸ್ಯೆಯಿಂದ ಅನೇಕರು ಅಸ್ವಸ್ಥರಾಗಿದ್ದರು’ ಎಂದು ಕೂಲಿ ಕಾರ್ಮಿಕರೊಬ್ಬರು ಹೇಳಿದರು.

 ಈ ಫ್ಯಾಕ್ಟರಿ ಆರಂಭಿಸುತ್ತಿರುವವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

‘ಊಟದ ತಟ್ಟೆ ಮುಂದೆ ವಾಂತಿ ಮಾಡಿದ್ದಾರೆ’

‘ಕೋಳಿ ಆಹಾರ ತಯಾರಿಕಾ ಘಟಕ ಇದ್ದಾಗ ಇಲ್ಲಿದ್ದ ಪರಿಸ್ಥಿತಿ ಬಣ್ಣಿಸುವುದು ಕಷ್ಟ. ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನಿತ್ಯವೂ ಜನರು ಅಸ್ವಸ್ಥರಾಗುತ್ತಿದ್ದರು. ಸಮೀಪದ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಅನೇಕರು ಮಧ್ಯಾಹ್ನ ಊಟದ ತಟ್ಟೆ ಮುಂದೆ ವಾಂತಿ ಮಾಡಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದವರು ಮತ್ತು ವಾಹನ ಸವಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಮುಂದೆ ಸಾಗುತ್ತಿದ್ದರು. ಮತ್ತೆ ಫ್ಯಾಕ್ಟರಿ ಆರಂಭವಾದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ’ ಎಂದು ಕೈಗಾರಿಕೆಯೊಂದರ ವ್ಯವಸ್ಥಾಪಕರು ತಿಳಿಸಿದರು.

ದೂರುಗಳು ಬಂದರೆ ಪರಿಶೀಲನೆ ನಡೆಸಿಯೇ ನಡೆಸುತ್ತೇವೆ. ಅದಲ್ಲದೆ ಸ್ವಯಂ ಪ್ರೇರಿತರಾಗಿ ಪರಿಶೀಲನೆ ಮಾಡುವ ವ್ಯವಸ್ಥೆಯೂ ಮಂಡಳಿಯಲ್ಲಿದೆ. ಅದು ನಿತ್ಯ ನಿರಂತರ ಎಂಬಂತೆ ನಡೆಯುತ್ತದೆ.
ಲಕ್ಷ್ಮಿಕಾಂತ್‌ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ
‘ಪರಿಶೀಲನೆ ನಡೆಸಲಾಗುವುದು’
ಕೈಗಾರಿಕಾ ಪ್ರದೇಶದ ಈ ಕಟ್ಟಡದಲ್ಲಿ ಕೋಳಿ ಆಹಾರ ತಯಾರಿ ಫ್ಯಾಕ್ಟರಿ ಸ್ಥಾಪಿಸಲು ಅನುಮತಿ ಪಡೆಯಲಾಗಿದೆ. ಅದರ ಅವಧಿ 2032ನೇ ಸೆಪ್ಟೆಂಬರ್‌ 30ರ ವರೆಗೆ ಇದೆ. ಅನುಮತಿ ಪತ್ರದಲ್ಲಿ ಸ್ಪಷ್ಟವಾದ ನಿರ್ದೇಶನಗಳು ಇವೆ. ಅದನ್ನು ಪಾಲಿಸದೇ ಇದ್ದರೆ ಕ್ರಮ ಕೈಗೊಳ್ಳಲು ಇಲಾಖೆಗೆ ಅಧಿಕಾರವಿದೆ. ಉದ್ದಿಮೆಯಿಂದ ಪರಿಸರಕ್ಕೆ ಅಥವಾ ಆರೋಗ್ಯಕ್ಕೆ ಹಾನಿಯಾಗುವ ಅಂಶಗಳು ಇವೆ ಎಂದು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಲಕ್ಷ್ಮಿಕಾಂತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.