ADVERTISEMENT

ಬಜಪೆ ಪಟ್ಟಣ ಪಂಚಾಯಿತಿ ಚುನಾವಣೆ: ಶೇ.64, ಕಿನ್ನಿಗೋಳಿ ಶೇ 69.36 ಮತದಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:02 IST
Last Updated 22 ಡಿಸೆಂಬರ್ 2025, 5:02 IST
ಬಜಪೆ ಪಟ್ಟಣ ಪಂಚಾಯಿತಿಯ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಒಲೈಸುತ್ತಿರುವ ವಿವಿಧ ಪಕ್ಷದ ಕಾರ್ಯಕರ್ತರು
ಬಜಪೆ ಪಟ್ಟಣ ಪಂಚಾಯಿತಿಯ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಒಲೈಸುತ್ತಿರುವ ವಿವಿಧ ಪಕ್ಷದ ಕಾರ್ಯಕರ್ತರು   

ಮೂಲ್ಕಿ: ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಕಿನ್ನಿಗೋಳಿಯಲ್ಲಿ ಶೇ 68.36 ಹಾಗೂ ಬಜಪೆಯಲ್ಲಿ ಶೇ.64ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದ ನಿರುತ್ಸಾಹದಲ್ಲಿಯೇ ಮತದಾನ ನಡೆದಿದ್ದು, ಮತದಾರರು ಮತದಾನದ ಕೇಂದ್ರಕ್ಕೆ ಬರುವಾಗ ಅವರನ್ನು ಒಲೈಸುವ ಪ್ರಯತ್ನ ವಿವಿಧ ಪಕ್ಷಗಳಿಂದ ಪೈಪೋಟಿಯಲ್ಲಿ ನಡೆಯಿತು. ವಿವಿಧ ವಾಹನಗಳ ಮೂಲಕ ಮತದಾರರನ್ನು ಕರೆತರುವ ದೃಶ್ಯ ಸಾಮಾನ್ಯವಾಗಿತ್ತು. ಶಾಸಕ ಉಮಾನಾಥ ಕೋಟ್ಯಾನ್ ಬಿಜೆಪಿಯ ಬೂತ್‌ಗಳಿಗೆ ತೆರಳಿ ಮತದಾನದ ಪ್ರಕ್ರಿಯೆಯ ಬಗ್ಗೆ ಪರಿಶೀಲನೆ ನಡೆಸಿದರೆ, ಕಾಂಗ್ರೆಸ್‌ನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಾಂಗ್ರೆಸ್‌ನ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ಮತಗಟ್ಟೆಗಳಿಗೆ ಸಮೀಪದಲ್ಲಿ ಮತದಾರರ ಮನವೊಲಿಸುವ ಸಲುವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪಕ್ಷದ ಬ್ಯಾನರ್, ಟೋಪಿಗಳನ್ನು ಧರಿಸಿದ್ದನ್ನು ಚುನಾವಣಾಧಿಕಾರಿಗಳು ಆಕ್ಷೇಪಿಸಿ ಅನುಮತಿ ಪಡೆಯದೇ ಇರುವುದರಿಂದ ಎಲ್ಲವನ್ನು ಪೊಲೀಸರ ಮೂಲಕ ತೆರವುಗೊಳಿಸಿದ ಘಟನೆ ಎರಡೂ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಂಡು ಬಂದಿತು.

ADVERTISEMENT

ಬಜಪೆಯ 9ನೇ ವಾರ್ಡ್‌ನ ಶಾಂತಿಗುಡ್ಡೆಯ ಮತಕೇಂದ್ರದಲ್ಲಿ ಬೆಳಿಗ್ಗೆಯೇ ಎರಡು ಪಕ್ಷದ ನಡುವೆ ವಿವಾದ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಸ್ಥಳಕ್ಕೆ ಕ್ಷಿಪ್ರ ಕಾರ್ಯಪಡೆ ಹಾಗೂ ಪೊಲೀಸ್ ಸಿಬ್ಬಂದಿ ಸಂಜೆಯವರೆಗೆ ಮೊಕ್ಕಾಂ ಹೂಡಿದ್ದರು. ಪೊಲೀಸ್‌ ಬಂದೊಬಸ್ತ್‌ನಲ್ಲಿ ಮತದಾನ ನಡೆಯಿತು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಚುನಾವಣಾ ಕೇಂದ್ರದ ಪಕ್ಷದ ಬೂತ್‌ಗೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು 

ಕಿನ್ನಿಗೋಳಿಯ ಕಿಲೆಂಜೂರು ವಾರ್ಡ್‌ನಲ್ಲಿ ಪಕ್ಷೇತರ ಬಂಡಾಯ ಅಭ್ಯರ್ಥಿಯ ಪರವಾಗಿ ಇದ್ದವರ ಹಾಗೂ ರಾಜಕೀಯ ಪಕ್ಷವೊಂದರ ಕಾರ್ಯಕರ್ತರ ನಡುವೆ ಪರಸ್ಪರ ಆರೋಪಗಳನ್ನು ಮಾಡಿ ಮತದಾರರ ಮೇಲೆ ಒತ್ತಡ ಹಾಕುತ್ತಿರುವುದನ್ನು ಪೊಲೀಸರು ನಿಯಂತ್ರಿಸಿದರು ಎಂದು ತಿಳಿದು ಬಂದಿದೆ. ಉಳಿದಂತೆ ಎರಡೂ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ಆಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಲವೊಂದು ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಶೇ 60 ಸ್ಪರ್ಧಾ ಕಣದ ಅಭ್ಯರ್ಥಿಗಳಾಗಲಿ ಅವರ ಮನೆಯವರಿಗಾಗಲಿ ಸ್ಪರ್ಧಿಸಿದ ಕ್ಷೇತ್ರದಲ್ಲಿ ಮತದಾನ ಮಾಡದೇ ಬೇರೆ ವಾರ್ಡ್‌ನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.