ಮಂಗಳೂರು: ಮಳೆಗಾಲದಲ್ಲಿ ವಿಶೇಷ ‘ಕಳಲೆ’ (ತುಳುವಿನಲ್ಲಿ ಕಣಿಲೆ) ತರಕಾರಿ ಮಾರುಕಟ್ಟೆಗೆ ಬಂದಿದೆ. ಕಳಲೆಯ 200 ಗ್ರಾಂ ತೂಕದ ಪೊಟ್ಟಣಗಳು ತಲಾ ₹ 80 ರೂಪಾಯಿಗೆ ಮಾರಾಟವಾಗುತ್ತಿವೆ.
‘ಮಳೆಗಾಲದಲ್ಲಿ ಮಾತ್ರ ಸಿಗುವ ಕಳಲೆಗೆ ಬೇಡಿಕೆ ಜಾಸ್ತಿ ಇದೆ. ಆದರೆ, ಲಭ್ಯತೆ ಕಡಿಮೆ ಇದೆ. ಈ ತರಕಾರಿ ಮಳೆಗಾಲದಲ್ಲಿ ಒಂದು ತಿಂಗಳು ಮಾತ್ರ ಸಿಗುತ್ತದೆ. ದರ ದುಬಾರಿಯಾದರೂ ಜನ ಇಷ್ಟಪಟ್ಟು ಇದನ್ನು ಖರೀದಿಸುತ್ತಾರೆ. ಕಳಲೆ ಜೊತೆ ಮೊಳಕೆ ಭರಿಸಿದ ಕಾಳುಗಳನ್ನು ಬಳಸಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ನಾವು ಸ್ವಲ್ಪ ಪ್ರಮಾಣದಲ್ಲಿ ಇದನ್ನು ತರಿಸುತ್ತೇವೆ. ಮಧ್ಯಾಹ್ನದೊಳಗೆ ಎಲ್ಲ ಪೊಟ್ಟಣಗಳೂ ಖಾಲಿಯಾಗುತ್ತವೆ’ ಎಂದು ಮಲ್ಲಿಕಟ್ಟೆ ಮಾರುಕಟ್ಟೆ ಬಳಿಯ ತರಕಾರಿ ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಆಷಾಡ ಮಾಸ ಆರಂಭವಾಗಿರುವುದರಿಂದ ಹಬ್ಬ ಹರಿದಿನಗಳ ಆಚರಣೆಗೆ ಹಾಗೂ ಶುಭಕಾರ್ಯಗಳು ಕಡಿಮೆ. ಇಂತಹ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಕೆಯಾಗುವಂತೆ ಮಂಗಳೂರು ಸೌತೆ, ಬೀನ್ಸ್‌ನಂತಹ ತರಕಾರಿಗಳ ದರ ಕಡಿಮೆಯಾಗಿದೆ. ಆದರೆ, ಬಟಾಟೆ, ಈರುಳ್ಳಿ ದರ ಹಚ್ಚಾಗಿದೆ.
‘ಬೀನ್ಸ್ ಕೆ.ಜಿಗೆ 140ರವರೆಗೂ ದರವಿತ್ತು. ಅದೀಗ ₹ 100ಕ್ಕೆ ಇಳಿದಿದೆ. ಮಂಗಳೂರು ಸೌತೆ ಪ್ರತಿ ಕೆ.ಜಿ.ಗೆ ₹ 60ರಂತೆ ಮಾರಾಟವಾಗುತ್ತಿತ್ತು. ಅದೀಗ ₹ 40ಕ್ಕೆ ಇಳಿದಿದೆ’ ಎಂದು ಬಿಕರ್ನಕಟ್ಟೆಯ ತರಕಾರಿ ವ್ಯಾಪಾರಿ ನವೀನ್ ತಿಳಿಸಿದರು.
‘ಬದನೆ ಪ್ರತಿ ಕೆ.ಜಿ.ಗೆ 60ರಂತೆ ಮಾರಾಟವಾಗುತ್ತಿತ್ತು. ಅದೀಗ ₹ 100ಕ್ಕೆ ಏರಿದೆ. ಈರುಳ್ಳಿ ಕೆ.ಜಿ.ಗೆ ₹ 45 ಇದ್ದುದು, ₹ 50, ಬಟಾಟೆ ಕೆ.ಜಿ.ಗೆ ₹ 40 ಇದ್ದುದು ₹ 50 ಆಗಿದೆ. ತುಸು ಅಗ್ಗ ಇದ್ದ ಬೀಟ್‌ರೂಟ್ ಕೆ.ಜಿಗೆ ₹ 30 ದರವಿತ್ತು. ಅದೀಗ ₹60ಕ್ಕೆ ಏರಿದೆ. ತುಸು ಕಡಿಮೆಯಾಗಿದ್ದ ಟೊಮೆಟೊ ದರ ಮತ್ತೆ ಹೆಚ್ಚಳವಾಗಿದೆ. ಪ್ರತಿ ಕೆ.ಜಿ.ಗೆ ₹ 50ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ದರ ₹ 65ಕ್ಕೆ ಹೆಚ್ಚಳವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.