ADVERTISEMENT

ಬಾಂಗ್ಲಾದಲ್ಲಿ ಚಿನ್ಮಯ್‌ ಕೃಷ್ಣದಾಸ್ ಪ್ರಭು ಬಂಧನ ಖಂಡಿಸಿ ವಿಎಚ್‌ಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 6:49 IST
Last Updated 30 ನವೆಂಬರ್ 2024, 6:49 IST
ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಹಾಗೂ ಅಲ್ಲಿನ  ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಹಿಂದೂ ಸಮಾಜದ ಪ್ರಮುಖರು ಭಜನೆ ನಡೆಸಿದರು : ಪ್ರಜಾವಾಣಿ ಚಿತ್ರ
ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಹಾಗೂ ಅಲ್ಲಿನ  ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಹಿಂದೂ ಸಮಾಜದ ಪ್ರಮುಖರು ಭಜನೆ ನಡೆಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲದಿದ್ದರೆ, ನಮ್ಮ ದೇಶದಲ್ಲಿರುವ ಬಾಂಗ್ಲಾದೇಶಿಯರಿಗೆ ಸಂಕಷ್ಟ ಎದುರಾಗಬಹುದು’ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಹಾಗೂ ಅಲ್ಲಿ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ ಸಂತ ಚಿನ್ಮಯ್‌ ಕೃಷ್ಣದಾಸ್ ಪ್ರಭು ಬಿಡುಗಡೆಗೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಶಾಂತಿ, ಸೌಹಾರ್ದ, ಮಾನವೀಯತೆ ಸಾರುವ ಇಸ್ಕಾನ್ ಸಂತರ  ಬಂಧನದ ವಿರುದ್ಧ  ಸಂತರೆಲ್ಲ ಧ್ವನಿ ಎತ್ತಿದ್ದೇವೆ. ಬಾಂಗ್ಲಾದ ಪರಿಸ್ಥಿತಿ ಕಂಡಾದರೂ ಹಿಂದೂಗಳು ಎಚ್ಚೆತ್ತು ಒಗ್ಗಟ್ಟಾಗಬೇಕು. ಪ್ರಪಂಚದಲ್ಲಿ ಎಲ್ಲೂ ಹಿಂದೂಗಳಿಗೆ ತೊಂದರೆಯಾಗದಿರಲಿ ಎಂದು ದೇವಸ್ಥಾನ, ಮಠ, ಭಜನಾ ಮಂದಿರಗಳಲ್ಲಿ ಪ್ರಾರ್ಥಿಸಬೇಕು’ ಎಂದರು.

ADVERTISEMENT

ವಿಎಚ್‌ಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ‘ ಬಾಂಗ್ಲಾ ಸ್ವತಂತ್ರವಾದಾಗ ಅಲ್ಲಿ ಶೇ.37ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ 7.5ಕ್ಕೆ ಇಳಿದಿದೆ. ಅಲ್ಲಿನ ಕೆಲವು ಹಿಂದೂ ಕುಟುಂಬಗಳು ಒಂದೋ ಮತಾಂತರಗೊಂಡಿವೆ ಅಥವಾ ದೇಶವನ್ನೇ ತೊರೆದಿವೆ. ಭಾರತದಲ್ಲಿರುವ ಬಾಂಗ್ಲಾ ನುಸುಳುಕೋರರ ವಿರುದ್ಧ ಹಿಂದೂಗಳು ತಿರುಗಿಬಿದ್ದರೆ  ಏನಾಗಬಹುದು’ ಎಂದು ಪ್ರಶ್ನಿಸಿದರು.

ವಿಎಚ್‌ಪಿಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ಮತಾಂಧರಿಗೆ ಅಧಿಕಾರ ದೊರೆತರೆ ಏನಾಗಬಹುದು ಎಂಬುದಕ್ಕೆ  ಬಾಂಗ್ಲಾ ಉದಾಹರಣೆ. ಅಲ್ಲಿನ ಹಿಂಸಾಚಾರವನ್ನು ಕಂಡೂ ವಿಶ್ವಸಮುದಾಯ ಬಾಯಿಗೆ ಬೀಗ ಹಾಕಿ ಕುಳಿತಿದೆ. ವಿಶ್ವಸಂಸ್ಥೆಯೂ ಮಾತನಾಡುತ್ತಿಲ್ಲ. ಚರ್ಚ್ ದಾಳಿ ವೇಳೆ ಅಮೆರಿಕದ ಅಧ್ಯಕ್ಷರೇ ಮಾತನಾಡಿದ್ದರು. ನಮ್ಮಲ್ಲಿನ ಬುದ್ದಿಜೀವಿಗಳು, ಜಾತ್ಯಾತೀತರು ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು

‘ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ಸೌರ್ಜನ್ಯ  ತಡೆಯಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು. ಇಸ್ಕಾನ್ ಸಂತರನ್ನು ಬಂಧಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಇಸ್ಕಾನ್‌ನ ಕುಳಾಯಿ ಶಾಖೆಯ ಸಚ್ಚಿದಾನಂದ ಅದ್ವೈತ ದಾಸ, ಕುಡುಪು ಕಟ್ಟೆ ಇಸ್ಕಾನ್‌ನ ಪ್ರೇಮ ಭಕ್ತಿ ಪ್ರಭು, ಓಂಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಿವ ಜ್ಞಾನಮಹಿ ಸರಸ್ವತಿ, ವಿಎಚ್‌ಪಿ  ಮುಖಂಡರಾದ ಗೋಪಾಲ ಕುತ್ತಾರ್,  ಶಿವಾನಂದ ಮೆಂಡನ್,  ಎಚ್.ಕೆ. ಪುರುಷೋತ್ತಮ,  ಕೃಷ್ಣಪ್ರಸನ್ನ, ಬಜರಂಗದಳ ಮುಖಂಡರಾದ  ಭುಜಂಗ ಕುಲಾಲ್,  ಪುನೀತ್ ಅತ್ತಾವರ, ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಪ್ರೇಮಾನಂದ ಶೆಟ್ಟಿ, ಗಣೇಶ್ ಪೊದುವಾಳ್, ಶಕೀಲಾ ಕಾವ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.