ADVERTISEMENT

ಹೊಸ ಪಾಂಡಿತ್ಯ ಕಟ್ಟಿಕೊಡುವ ಬನ್ನಂಜೆ ಬದುಕು: ಚಕ್ರವರ್ತಿ ಸೂಲಿಬೆಲೆ

‘ವಿಶ್ವ ಬನ್ನಂಜೆ 90ರ ಪುತ್ತೂರು ನಮನ’ದಲ್ಲಿ ಸೂಲಿಬೆಲೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:18 IST
Last Updated 6 ಅಕ್ಟೋಬರ್ 2025, 4:18 IST
ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ನಡೆದ ವಿಶ್ವ ಬನ್ನಂಜೆ 90ರ ಪುತ್ತೂರು ನಮನ ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಿದರು
ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ನಡೆದ ವಿಶ್ವ ಬನ್ನಂಜೆ 90ರ ಪುತ್ತೂರು ನಮನ ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಿದರು   

ಪುತ್ತೂರು: ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಬದುಕು ಹೊಸ ಪಾಂಡಿತ್ಯ ಕಟ್ಟಿಕೊಡುತ್ತದೆ. ಎಲ್ಲ ಕೇತ್ರಗಳಲ್ಲೂ ಪಾಂಡಿತ್ಯ ಪ್ರದರ್ಶಿಸಿದ ಬನ್ನಂಜೆ ಅವರನ್ನು ಸಮಾಜದ ಪರಿವರ್ತನೆಯ ದೃಷ್ಟಿಯಿಂದ ನಮ್ಮ ಕಾಲದ ಋಷಿ ಪರಂಪರೆಗೆ ಸೇರಿಸಬಹುದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ಪುತ್ತೂರಿನ ಬಹುವಚನಂ ಆಶ್ರಯದಲ್ಲಿ ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ನಡೆದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನೆನಪಿನ ‘ವಿಶ್ವ ಬನ್ನಂಜೆ 90ರ ಪುತ್ತೂರು ನಮನ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬನ್ನಂಜೆ ಅವರು ಶುದ್ಧ ಚಿಂತಕ. ಬನ್ನಂಜೆ ಪದವೇ ಒಂದು ಮಂತ್ರ ಎನ್ನುವ ಮಾತು ಸತ್ಯ. ಸಮಾಜದ ಪಥ ಬದಲಾಯಿಸುವ ಸಾಮರ್ಥ್ಯ ಕೆಲವರಿಗೆ ಮಾತ್ರ ಇರುತ್ತದೆ. ಅಗ್ರಗಣ್ಯ ವ್ಯಕ್ತಿಗಳಲ್ಲಿ ಬನ್ನಂಜೆ ಅವರೂ ಒಬ್ಬರು. ಅತ್ಯಂತ ಗಹನ ವಿಷಯಗಳನ್ನೂ ಸರಳವಾಗಿ ಮುಟ್ಟಿಸುವ ಸಾಮರ್ಥ್ಯ ಅವರ ವೈಶಿಷ್ಟ್ಯವಾಗಿತ್ತು. ಅಂತರಂಗದೊಳಗೆ ಜ್ಞಾನದ ಭಂಡಾರ ಹೊಂದಿ ಹೊರಗೆ ಎಡ ಚಿಂತಕರಂತೆ ಕಂಡ ಅವರನ್ನು ಒಂದು ಚೌಕಟ್ಟಿಗೆ ಕಟ್ಟಿ ಇಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ADVERTISEMENT

ಪ್ರಸ್ತಾವಿಕವಾಗಿ ಮಾತನಾಡಿದ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್, ವ್ಯಾಪಕ ವಿಚಾರಧಾರೆ, ಅಗಾಧ ಸಾರಸ್ವತ ಸಂಪತ್ತು, ಛಂದೋ ವಿರಾಟ ಪ್ರತಿಭೆಯಾಗಿದ್ದ ಬನ್ನಂಜೆ ಅವರು ಇಡೀ ಭಾರತದಲ್ಲೇ ಉಪನಿಷತ್ತುಗಳ ಮೇಲೆ ಸ್ವತಂತ್ರವಾದ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಬರೆದವರು. ಗಟ್ಟಿಯಾಗಿ, ತೂಕವಾಗಿ ಆತ್ಮವಿಶ್ವಾಸದಿಂದ ವಿಚಾರಗಳನ್ನು ಪ್ರತಿಪಾದಿಸಿದವರು. ಯಾರೂ ಮುಟ್ಟದ ಜಾಗವನ್ನು ಮುಟ್ಟಿದ ಬನ್ನಂಜೆ ಅವರ ಕೃತಿ, ಪ್ರವಚನ, ಪಾಂಡಿತ್ಯ ಎಂದಿಗೂ ನಮ್ಮ ಮುಂದಿರುತ್ತದೆ ಎಂದರು.

ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬನ್ನಂಜೆ 90ರ ನಮನ ಪುತ್ತೂರು ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಸ್ವಾಮಿ ಭಾಗವಹಿಸಿದ್ದರು. ಪುತ್ತೂರು ಬಹುವಚನಂನ ಡಾ.ಶ್ರೀಶ ಕುಮಾರ್ ಸ್ವಾಗತಿಸಿದರು. ಬಹುವಚನಂನ ರಂಗಕರ್ಮಿ ಐ.ಕೆ.ಬೊಳುವಾರು ನಿರೂಪಿಸಿದರು.

ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಪ್ರಾಧ್ಯಾಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಭಾರತಿ ಕಲ್ಲೂರಾಯ ಅವರು ವಿಚಾರ ಮಂಡಿಸಿದರು. ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಬನ್ನಂಜೆ ಹಾಡುಗಬ್ಬ ಪ್ರಸ್ತುತ ಪಡಿಸಿದರು. ಚಲನಚಿತ್ರ ನಿರ್ದೇಶಕ ಸುಚೇಂದ್ರ ಪ್ರಸಾದ್, ತಂಡದವರು ವೀಣಾ ಬನ್ನಂಜೆ ವಿರಚಿತ `ನನ್ನ ಪಿತಾಮಹ' ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.