ಬಂಟ್ವಾಳ: ರೋಗ ರುಜಿನಗಳಿಗೆ ಔಷಧ ಪಡೆಯುವುದಕ್ಕಿಂತಲೂ ರೋಗ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಹೇಳಿದರು.
ಇಲ್ಲಿನ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಮತ್ತು ವಲಯ ಬಂಟರ ಸಂಘ, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮತ್ತು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಏರ್ಪಡಿಸಿದ್ದ ರಕ್ತದಾನ ಮತ್ತು ವೈದ್ಯಕೀಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಹಾಯಕ ಗವರ್ನರ್ ಪ್ರೊ.ಜಯಕುಮಾರ್ ಶೆಟ್ಟಿ, ಹೃದ್ರೋಗ ತಜ್ಞ ಡಾ.ಪುರುಷೋತ್ತಮ ರಾಮಯ್ಯ, ಡಾ. ಸಂಗೀತಾ ಶೆಟ್ಟಿ ಸಿದ್ಧಕಟ್ಟೆ ಮಾತನಾಡಿದರು.
ಡಾ.ಪುರುಷೋತ್ತಮ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು. 80 ಮಂದಿ ರಕ್ತದಾನ ಮಾಡಿದರು. ಅಂಚೆ ಇಲಾಖೆ ಆರೋಗ್ಯ ವಿಮೆ ಬಗ್ಗೆ ಗುರುಪ್ರಸಾದ್ ಮಾಹಿತಿ ನೀಡಿದರು.
ರೋಟರಿ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪ್ರಕಾಶ್, ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ ಇದ್ದರು.
ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ವಲಯ ಬಿಲ್ಲವರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫರ್ನಾಂಡಿಸ್ ವಂದಿಸಿದರು. ಸುಭಾಸ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.