ಬಂಟ್ವಾಳ: ಜಿಲ್ಲೆಯಲ್ಲಿ ಅನಾದಿ ಕಾಲದಿಂದ ನಡೆಯುತ್ತಿರುವ ಯಕ್ಷಗಾನ ಸೇರಿದಂತೆ ನೇಮೋತ್ಸವ, ನಾಟಕ, ಭಜನೆ ಮೊದಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕದ ನೆಪದಲ್ಲಿ ಪೊಲೀಸರು ಅಡ್ಡಿಪಡಿಸುವುದು ಮತ್ತು ಅನುಮತಿ ನಿರಾಕರಣೆ ಮಾಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಸಂಸ್ಕಾರ ಭಾರತಿ ಘಟಕದ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಆಗ್ರಹಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ ಸುಮಾರು 750 ಮಂದಿ ಸಂಸ್ಕಾರ ಭಾರತಿ ಸಂಘಟನೆ ಮೂಲಕ ದೇಶ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದರು.
ದೇಶದಲ್ಲಿ 20 ವರ್ಷಗಳ ಹಿಂದೆ ಅನುಷ್ಠಾನಗೊಂಡ ಕಾಯ್ದೆಯಡಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ಹಿಂದೂ ಸಮಾಜದ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಮಾತ್ರ ಸರ್ಕಾರ ಏಕೆ ಎಚ್ಚೆತ್ತುಕೊಂಡು ಬಳಿಕ ರಾಜಕೀಯ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಮೌನವಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ದೇಶದ ಎಲ್ಲೂ ಇಲ್ಲದ ಕಾನೂನು ಈ ಜಿಲ್ಲೆಯಲ್ಲಿ ಮಾತ್ರ ಅನುಷ್ಠಾನಗೊಳಿಸುತ್ತಿರುವ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಹಲವೆಡೆ ಯಕ್ಷಗಾನ ಮತ್ತಿತರ ಧಾರ್ಮಿಕ ನಂಟು ಹೊಂದಿರುವ ಸಾಂಸ್ಕೃತಿಕ ಚಟುವಟಿಕೆಗೆ ಅಡ್ಡಿಪಡಿಸಿದ್ದು, ಮುಂಬರುವ ದಸರಾ ಕಾರ್ಯಕ್ರಮದಲ್ಲಿ ಇದೇ ಪ್ರವೃತ್ತಿ ಪುನರಾವರ್ತನೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಘಟಕದದ ಅಧ್ಯಕ್ಷ ಟಿ.ತಾರನಾಥ ಕೊಟ್ಟಾರಿ ಆಗ್ರಹಿಸಿದರು.
ಪ್ರಾಂತ ಉಪಾಧ್ಯಕ್ಷ ರೂಪಲೇಖ ಪುತ್ತೂರು, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಜಾನಪದ ವಿಭಾಗ ಪ್ರಮುಖ್ ಮನ್ಮಥ ಶೆಟ್ಟಿ ಪುತ್ತೂರು, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.