ADVERTISEMENT

ದಕ್ಷಿಣ ಕನ್ನಡ | ಕೋವಿಡ್‌ ಹೊಡೆತಕ್ಕೆ ತತ್ತರಿಸಿದ ಬಾರ್‌ ಮಾಲೀಕರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ

ವಿ.ಎಸ್.ಸುಬ್ರಹ್ಮಣ್ಯ
Published 25 ಆಗಸ್ಟ್ 2020, 20:15 IST
Last Updated 25 ಆಗಸ್ಟ್ 2020, 20:15 IST
   

ಮಂಗಳೂರು: ಕೋವಿಡ್‌ ಕಾರಣದಿಂದ ಮದ್ಯ ಮಾರಾಟಕ್ಕೆ ವಿಧಿಸಿರುವ ನಿರ್ಬಂಧದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಾರ್‌ ಮಾಲೀಕರು ಅಕ್ಷರಶಃ ತತ್ತರಿಸಿದ್ದಾರೆ. ‘ಪಾರ್ಸೆಲ್‌’ಗೆ ಸೀಮಿತವಾಗಿ ವಹಿವಾಟು ನಡೆಯುತ್ತಿರುವುದರಿಂದ ಈ ಉದ್ಯಮ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ಜಿಲ್ಲೆಯಲ್ಲಿ ಒಟ್ಟು 412 ಮದ್ಯದಂಗಡಿಗಳಿವೆ. ಈ ಪೈಕಿ 212 ಬಾರ್‌ಗಳಿವೆ. ಮಾರ್ಚ್‌ 24ರಿಂದ ಸಂಪೂರ್ಣ ಬಂದ್‌ ಆಗಿದ್ದವು. ಮೇ ಮೊದಲ ವಾರದಿಂದ ಪಾರ್ಸೆಲ್‌ ನೀಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ವ್ಯಾಪಾರದ ಪ್ರಮಾಣ ಗಣನೀಯವಾಗಿ ತಗ್ಗಿದೆ. ಬಹುತೇಕ ಬಾರ್‌ಗಳ ಮಾಲೀಕರು ಬಾಗಿಲು ಮುಚ್ಚಲೂ ಆಗದೆ, ತೆಗೆಯಲೂ ಆಗದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

‘ಬಾರ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಇನ್ನೂ ಅನುಮತಿ ನೀಡಿಲ್ಲ. ಹಿಂದಿನ ದಿನಗಳಿಗೆ ಹೋಲಿಸಿದರೆ ಶೇ 20ರಿಂದ ಶೇ 25ರಷ್ಟು ಮಾತ್ರ ವಹಿವಾಟು ನಡೆಯುತ್ತಿದೆ. ಖಾದ್ಯಗಳ ತಯಾರಿ, ವ್ಯಾಪಾರ ಎರಡೂ ಗಣನೀಯವಾಗಿ ತಗ್ಗಿದೆ. ಮದ್ಯ ದಾಸ್ತಾನು, ನಿರ್ವಹಣೆ, ನೌಕರರಿಗೆ ಸಂಬಳ ನೀಡಲಾಗದ ಸ್ಥಿತಿಯಲ್ಲಿದ್ದೇವೆ. ಒಂದಷ್ಟು ಆರ್ಥಿಕ ಉತ್ತೇಜನದೊಂದಿಗೆ ವಹಿವಾಟಿಗೆ ಮುಕ್ತ ಅವಕಾಶ ನೀಡಿದರೆ ಮಾತ್ರ ನಾವೂ ಉಳಿಯಬಹುದು, ನೌಕರರನ್ನೂ ಕಾಪಾಡಬಹುದು’ ಎಂದು ಜಿಲ್ಲೆಯ ಬಾರ್‌ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ADVERTISEMENT

ಸಾವಿರಾರು ಕಾರ್ಮಿಕರು ಅತಂತ್ರ:ಜಿಲ್ಲೆಯಲ್ಲಿ ಸಾಮಾನ್ಯ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಂದ ತಾರಾ ಹೋಟೆಲ್‌ಗಳವರೆಗೆ ಹಲವು ದರ್ಜೆಯ ಬಾರ್‌ಗಳಿವೆ. ಸಾಮಾನ್ಯ ಬಾರ್‌ಗಳಲ್ಲಿ ಹತ್ತರಿಂದ ಐವತ್ತರವರೆಗೆ ನೌಕರರು ಇದ್ದರೆ, ತಾರಾ ಹೋಟೆಲ್‌ಗಳಲ್ಲಿ ಬಾರ್‌ನಿಂದ ನೇರ ಮತ್ತು ಪರೋಕ್ಷ ಉದ್ಯೋಗ ಪಡೆದವರ ಸಂಖ್ಯೆ 300ಕ್ಕೂ ಹೆಚ್ಚಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನಗರ ಪ್ರದೇಶಗಳ ಬಾರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯಗಳ ಕಾರ್ಮಿಕರೇ ಇದ್ದರು. ಲಾಕ್‌ಡೌನ್‌ ಆರಂಭವಾದ ಬಳಿಕ ತಮ್ಮ ಊರುಗಳಿಗೆ ಹೋಗಿರುವ ಸಾವಿರಾರು ಮಂದಿ ಇನ್ನೂ ವಾಪಸ್‌ ಬಂದಿಲ್ಲ. ಮತ್ತೆ ವಹಿವಾಟು ಆರಂಭವಾಗುವ ನಿರೀಕ್ಷೆಯಲ್ಲಿ ಇಲ್ಲಿಯೇ ಉಳಿದ ಒಂದಷ್ಟು ಮಂದಿ ಕೆಲಸವೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಹೆಚ್ಚಿನ ಬಾರ್‌ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾಸ್ತಾನು ಇದ್ದ ಮದ್ಯ ಮಾರಾಟ ಮಾಡಿ ಜೀವನ ನಿರ್ವಹಣೆ, ಕಾರ್ಮಿಕರ ವೇತನ ಪಾವತಿಗೆ ಬಳಸಿದ್ದಾರೆ. ಈಗ ಪೂರ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವುದಕ್ಕೆ ಆರ್ಥಿಕ ಶಕ್ತಿಯೇ ಇಲ್ಲವಾಗಿದೆ. ವಾಪಸ್‌ ಹೋಗಿರುವ ಕಾರ್ಮಿಕರೂ ಬಂದಿಲ್ಲ. ಉದ್ಯಮದ ಚೇತರಿಕೆಗೆ ರಾಜ್ಯ ಸರ್ಕಾರ ಏನಾದರೂ ನೆರವು ನೀಡಬಹುದು ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಂ. ಗಣೇಶ್‌ ಶೆಟ್ಟಿ ಪ್ರತಿಕ್ರಿಯಿಸಿದರು.

ಸೆಪ್ಟೆಂಬರ್‌ನಿಂದ ಸಾಲದ ಕಂತುಗಳ ಪಾವತಿ ಆರಂಭವಾಗುತ್ತದೆ. ಆ ಬಳಿಕ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಸರ್ಕಾರ ತೆರಿಗೆ ಕಡಿಮೆ ಮಾಡಿ, ಆರ್ಥಿಕ ನೆರವು ನೀಡುವ ಮೂಲಕ ಬಾರ್‌ಗಳನ್ನು ನಂಬಿಕೊಂಡ ಮಾಲೀಕರು, ಕಾರ್ಮಿಕರ ರಕ್ಷಣೆ ಮಾಡಬೇಕು ಎಂದು ಅವರು ಆಗ್ರಹಿಸುತ್ತಾರೆ.

ಪರವಾನಗಿ ನವೀಕರಣಕ್ಕೆ ಸಂಕಷ್ಟ

‘ಮದ್ಯದಂಗಡಿಗಳ ಪರವಾನಗಿ ನವೀಕರಣ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಬಾರ್‌ಗಳ ಪರವಾನಗಿ ನವೀಕರಣಕ್ಕೆ ₹ 6.90 ಲಕ್ಷ ಶುಲ್ಕವಿದೆ. ದಕ್ಷಿಣ ಕನ್ನಡ ಜಿಲ್ಲೆಯ 24 ಬಾರ್‌ಗಳ ಮಾಲೀಕರು ಆರ್ಥಿಕ ಸಂಕಷ್ಟದಿಂದ ಈವರೆಗೂ ಪರವಾನಗಿ ನವೀಕರಿಸಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಂ. ಗಣೇಶ್‌ ಶೆಟ್ಟಿ ತಿಳಿಸಿದರು.

ಜಿಲ್ಲೆಯಲ್ಲಿರುವ ಮದ್ಯದಂಗಡಿಗಳು

ವೈನ್‌ ಶಾಪ್‌ಗಳು– 152

ಬಾರ್‌ ಅಂಡ್‌ ರೆಸ್ಟೊರೆಂಟ್‌– 214

ಎಂಆರ್‌ಪಿ ದರದ ಮದ್ಯದಂಗಡಿ– 22

ಪಬ್‌– 19

ವೈನ್‌ ಟಾವರಿನ್‌– 2

ವೈನ್‌ ಬೊಟಿಕ್‌– 2

ಮೈಕ್ರೋ ಬ್ರೀವರಿ– 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.