ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಸುತ್ತಿರುವ ಚಳವಳಿಯ ಭಾಗವಾಗಿ ಹಾಗೂ ಈ ಕುರಿತು ಎಲ್ಲ ಜಿಲ್ಲೆಗಳ ವಕೀಲರಿಗೆ ಅರಿವು ಮೂಡಿಸಲು ಡಿ.13ರಿಂದ 15ರವರೆಗೆ ನಗರದಲ್ಲಿ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ಥ್ರೋ ಬಾಲ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೈಗಾರಿಕೆ, ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿಗೆ ಹೈಕೋರ್ಟ್ ಪೀಠ ಬಂದಲ್ಲಿ ಜನರಿಗೆ ಅನುಕೂಲವಾಗಲಿದೆ. ಈ ಭಾಗದ ಶೇ 30ರಷ್ಟು ಪ್ರಕರಣಗಳು ಬೆಂಗಳೂರು ಹೈಕೋರ್ಟ್‌ನಲ್ಲಿವೆ. ಭೂ ನ್ಯಾಯ ಮಂಡಳಿಯ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಹೈಕೋರ್ಟ್ ಪೀಠಕ್ಕಾಗಿ ಹೋರಾಟ ನಡೆಸಲಾಗುತ್ತಿದ್ದು, ಪ್ರಸ್ತುತ ಕ್ರಿಕೆಟ್ ಮತ್ತು ಥ್ರೋ ಬಾಲ್ ಟೂರ್ನಿ ಆಯೋಜಿಸಿ, ರಾಜ್ಯದ ಎಲ್ಲ ಎಲ್ಲ ಜಿಲ್ಲೆಗಳ ವಕೀಲರನ್ನು ನಗರಕ್ಕೆ ಆಹ್ವಾನಿಸಿ ಮತ್ತೊಮ್ಮೆ ಹಕ್ಕೊತ್ತಾಯ ಸಲ್ಲಿಸಲಾಗುವುದು’ ಎಂದರು.
ಕ್ರಿಕೆಟ್‌ನಲ್ಲಿ 36 ತಂಡಗಳು, ಥ್ರೋ ಬಾಲ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ. ನೆಹರೂ ಮೈದಾನ ಮತ್ತು ಪಣಂಬೂರು ಎನ್‌ಎಂಪಿಎ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ನೆಹರೂ ಮೈದಾನದಲ್ಲಿ ಹೊನಲು ಬೆಳಕಿನ ಟೂರ್ನಿ ನಡೆಯಲಿದೆ. ಡಿ.13ರಂದು ಬೆಳಿಗ್ಗೆ 8 ಗಂಟೆಗೆ ವಕೀಲ ಟಿ.ಎನ್. ಪೂಜಾರಿ ಟೂರ್ನಿಗೆ ಚಾಲನೆ ನೀಡುವರು. ಡಿ.14ರಂದು ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲೆಯ ಎಲ್ಲ ಶಾಸಕನ್ನು ಆಹ್ವಾನಿಸಲಾಗಿದೆ. ಈ ವೇಳೆ ನಮ್ಮ ಬೇಡಿಕೆಯನ್ನು ಮಂಡಿಸಲಾಗುವುದು ಎಂದು ಹೇಳಿದರು.
15ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಜೀರ್ ಭಾಗವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಸಮರೋಪ ಭಾಷಣ ಮಾಡುವರು. ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲರ ಸಂಘದಿಂದ ಪತ್ರ ಚಳವಳಿ ನಡೆಸಲಾಗುವುದು. ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ರಾಘವೇಂದ್ರ ಹೇಳಿದರು.
ವಕೀಲರ ಸಂಘದ ಸುಜಿತ್ ಕುಮಾರ್, ಶ್ರೀಧರ್ ಎಚ್, ಜಗದೀಶ್ ಶೇಣವ, ಅಶೋಕ್ ಅರಿಗ, ಗಿರೀಶ್ ಶೆಟ್ಟಿ, ಜ್ಯೋತಿ ಸುವರ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.