ಮಂಗಳೂರು: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯು ವೈದ್ಯರ ದಿನಾಚರಣೆ ಸಂದರ್ಭದಲ್ಲಿ ನೀಡುವ ಡಾ.ಬಿ.ಸಿ.ರಾಯ್ ಪ್ರಶಸ್ತಿಗೆ ಈ ಬಾರಿ ಮಂಗಳೂರು ಐಎಂಎ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ.ಕುಲಾಲ್, ಎರಡು ದಶಕಗಳಿಂದ ವೈದ್ಯ ಪ್ರಾಧ್ಯಾಪಕರಾಗಿ, ಕುಟುಂಬ ವೈದ್ಯ ಹಾಗೂ ಆರೋಗ್ಯ ಸಲಹಾ ತಜ್ಞರಾಗಿ ಕುಲಾಲ್ ಹೆಲ್ತ್ ಸೆಂಟರ್ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ, ವೈದ್ಯಕೀಯ ಶಿಕ್ಷಣ, ವೈದ್ಯ ಸಂಘಟನೆ, ವೈದ್ಯ ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಡಾ.ಕುಲಾಲ್ ಅವರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ಕನ್ನಡಕಟ್ಟೆ ಮೂಲಕ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿದ್ದಾರೆ.
ಐಎಂಎ ಬರಹಗಾರರ ಬಳಗ ಹುಟ್ಟುಹಾಕಿ, ಪ್ರಥಮ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನವನ್ನು ನಗರದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರಶಸ್ತಿಗೆ ಪಾತ್ರರಾದ ಅತ್ಯಂತ ಕಿರಿಯ ವಯಸ್ಸಿನ ವೈದ್ಯರು ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಮತ್ತು ಶಿಕ್ಷಣ ಪ್ರಕೋಷ್ಠಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಸಂಚಾಲಕರಾಗಿರುವ ಡಾ.ಅಣ್ಣಯ್ಯ ಕುಲಾಲ್, ಸಮಾಜಮುಖಿ ಕಾರ್ಯಗಳ ಜತೆಗೆ ಬರಹ, ಭಾಷಣ, ಸಂಘಟನಾ ಚಾತುರ್ಯದ ಮೂಲಕವೂ ಹೆಸರು ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.