ADVERTISEMENT

ತಾಲ್ಲೂಕು ಕಚೇರಿ ಬಳಿ ತಡೆ

ಸೌಜನ್ಯಾ ಪರ ಹೋರಾಟಗಾರರ ಮೇಲೆ ಸುಳ್ಳು ಕೇಸ್ ಆರೋಪ: ತಹಶೀಲ್ದಾರ್‌ ಮೂಲಕ ಮನವಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:26 IST
Last Updated 28 ಅಕ್ಟೋಬರ್ 2025, 5:26 IST
ಬೆಳ್ತಂಗಡಿ ತಾಲ್ಲೂಕು ಕಚೇರಿಯ ಮುಂದೆ ಜಮಾಯಿಸಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಸೌಜನ್ಯಾ ಪರ ಹೋರಾಟಗಾರರು
ಬೆಳ್ತಂಗಡಿ ತಾಲ್ಲೂಕು ಕಚೇರಿಯ ಮುಂದೆ ಜಮಾಯಿಸಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಸೌಜನ್ಯಾ ಪರ ಹೋರಾಟಗಾರರು   

ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಧಮನ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ನೀಡಲು ಬಂದಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಹೋರಾಟಗಾರರನ್ನು ಸೋಮವಾರ ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಹೋರಾಟಗಾರರು ಪ್ರತಿಭಟನೆಗೆ ಅನುಮತಿ ಕೋರಿದ್ದರು. ‘ಬೆಳ್ತಂಗಡಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ. ಆದೇಶ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ಹೇಳಿದ್ದರು. ಹೀಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಬೆಳಿಗ್ಗೆ 10.30ರ ಸುಮಾರಿಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರ ನೇತೃತ್ವದಲ್ಲಿ ಕಾರ್ಯಕರ್ತರ ತಂಡ ಮಿನಿ ವಿಧಾನಸೌಧದ ಮುಂಭಾಗಕ್ಕೆ ಬರುತ್ತಿದ್ದಂತೆ ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ಬಾಪುರಮಠ ನೇತೃತ್ವದಲ್ಲಿ ಪೊಲೀಸರು ತಡೆದರು.  

ADVERTISEMENT

ಸೌಜನ್ಯಾ ತಾಯಿ ಕುಸುಮಾವತಿ, ಹೋರಾಟಗಾರ್ತಿ ಪ್ರಸನ್ನ ರವಿ ಕೂಡ ಅಲ್ಲಿಗೆ ಬಂದರು. ಅವರನ್ನೂ ಪೊಲೀಸರು ತಡೆದರು. ‘ನಾವು ಪ್ರತಿಭಟನೆ ಮಾಡಲು ಬಂದಿಲ್ಲ, ಮನವಿ ಸಲ್ಲಿಸಲು ಬಂದಿದ್ದೇವೆ. ಅದಕ್ಕೆ ಅವಕಾಶ ನೀಡಿ’ ಎಂದು ಹೋರಾಟಗಾರರು ಅಲ್ಲೇ ಕುಳಿತರು. ತಹಶೀಲ್ದಾರರ ಜೊತೆ ಮಾತನಾಡಿದ ಬಳಿಕ ಪೊಲೀಸರು ಕುಸುಮಾವತಿ, ಪ್ರಸನ್ನ ರವಿ ಹಾಗೂ ಮೋಹನ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲು ಅವಕಾಶ ನೀಡಿದರು.

ಟಪಾಲು ಮನವಿ ಸಲ್ಲಿಕೆ

ಹೋರಾಟಗಾರರು ಮಿನಿವಿಧಾನ ಸೌಧದ ಒಳಗೆ ತೆರಳಿದ ವೇಳೆ ತಹಶೀಲ್ದಾರರು ಕರ್ತವ್ಯ ನಿಮಿತ್ತ ಹೊರಗಿದ್ದರು. ಉಪ ತಹಶೀಲ್ದಾರರನ್ನು ಸಂಪರ್ಕಿಸಿದಾಗ ತಹಶೀಲ್ದಾರರಿಂದ ಮಾಹಿತಿ ಪಡೆದು ಕಚೇರಿಯ ಟಪಾಲು ವಿಭಾಗದಲ್ಲಿ ಮನವಿ ನೀಡುವಂತೆ ಸೂಚಿಸಿದರು. ಅದರಂತೆ ಟಪಾಲು ವಿಭಾಗದಲ್ಲಿ ಮನವಿ ಸಲ್ಲಿಸಲಾಯಿತು. 

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮುಖಂಡರಾದ ಪ್ರಜ್ವಲ್ ಗೌಡ ಕೆ.ವಿ., ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನಿವಾಸ, ಉದಯ ಕೊಯ್ಯೂರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.