ADVERTISEMENT

ಕೇರಳ ಚಾಲಕರಿಗೆ ₹6, ರಾಜ್ಯದವರಿಗೆ ₹4!: ಗ್ಯಾಸ್ ಲಾರಿ ಚಾಲಕರಿಗೆ ಕಿರುಕುಳ ಆರೋಪ

ಭಾರತ್ ಗ್ಯಾಸ್ ಲಾರಿ ಚಾಲಕರಿಗೆ ಕಿರುಕುಳ ಆರೋಪ: ದರ ನಿಗದಿಯಲ್ಲಿ ತಾರತಮ್ಯ; ಮುಷ್ಕರ ಹೂಡುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 12:34 IST
Last Updated 18 ಜೂನ್ 2022, 12:34 IST
ಪತ್ರಿಕಾಗೋಷ್ಠಿಯಲ್ಲಿ ವಸಂತ್ ಆಚಾರಿ ಮಾತನಾಡಿದರು. ಮುನೀರ್ ಕಾಟಿಪಳ್ಳ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ವಸಂತ್ ಆಚಾರಿ ಮಾತನಾಡಿದರು. ಮುನೀರ್ ಕಾಟಿಪಳ್ಳ ಇದ್ದಾರೆ   

ಮಂಗಳೂರು: ಕೇರಳಕ್ಕೆ ಅಡುಗೆ ಅನಿಲ ಸಾಗಿಸುವ ಲಾರಿ ಚಾಲಕರಿಗೆ ಕಿಲೋಮೀಟರ್‌ಗೆ ₹ 6 ನೀಡುತ್ತಿದ್ದರೆ, ಕರ್ನಾಟಕದ ಚಾಲಕರಿಗೆ ಸಿಗುವುದು ₹ 4 ಮಾತ್ರ!

‘ಭಾರತ್ ಗ್ಯಾಸ್‌ನ ಬೈಕಂಪಾಡಿ ಘಟಕದಿಂದ ಅನಿಲ ಸಾಗಿಸುವ ಚಾಲಕರನ್ನು ಲಾರಿ ಮಾಲೀಕರು ವರ್ಷಗಳಿಂದ ಶೋಷಣೆಗೆ ಒಳಪಡಿಸುತ್ತಿದ್ದು ಇದಕ್ಕೆ ಕಂಪೆನಿಯೂ ಒತ್ತಾಸೆಯಾಗಿ ನಿಂತಿದೆ’ ಎಂದು ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘದವರು ದೂರಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಇದೇ 21ರಿಂದ ಮುಷ್ಕರ ಹೂಡುವುದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಕಿಲೋಮೀಟರ್‌ಗೆ ನಿಗದಿ ಮಾಡಿರುವ ದರವನ್ನು ಪರಿಷ್ಕರಿಸುವಂತೆ ಹಲವಾರು ಬಾರಿ ಒತ್ತಾಯಿಸಲಾಗಿದೆ. ಪ್ರತಿಭಟನೆಗೆ ಮಣಿದ ಮಾಲೀಕರು ಮೇ 15ರಂದು ಚರ್ಚೆಗೆ ಆಹ್ವಾನಿಸಿದ್ದರು. ಅಲ್ಲಿ, ಕಿಲೋಮೀಟರ್‌ಗೆ ₹ 5 ನೀಡಲು ಒಪ್ಪಿಕೊಂಡಿದ್ದರು. ಆದರೆ ಇಲ್ಲಿಯ ವರೆಗೆ ಜಾರಿಗೆ ಬರಲಿಲ್ಲ. ಕೇರಳಕ್ಕೆ ಹೋಗುವ ಲಾರಿಗಳಿಗೆ ನೀಡುವಷ್ಟು ದರ ನೀಡದೇ ಇದ್ದರೂ ಸಭೆಯಲ್ಲಿ ಒಪ್ಪಿಕೊಂಡ ದರವನ್ನಾದರೂ ನೀಡುಲು ಸೂಚಿಸುವಂತೆ ಕಂಪೆನಿಗೂ ಮನವಿ ಮಾಡಲಾಗಿತ್ತು. ಆದರೂ ಪ್ರಯೋಜನವಾಗಲಿಲ್ಲ. ಮಾತು ಉಳಿಸಿಕೊಳ್ಳಲು ಇನ್ನೂ ಎರಡು ದಿನಗಳ ಅವಕಾಶವಿದ್ದು ಪೂರಕ ಸ್ಪಂದನೆಗಾಗಿ ಕಾಯುತ್ತಿದ್ದೇವೆ’ ಎಂದು ಮೋಟರ್‌ ಟ್ರಾನ್ಸ್‌ಪೋರ್ಟ್‌ ಆ್ಯಂಡ್ ಎಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಸಂತ್ ಆಚಾರಿ ಹೇಳಿದರು.

ADVERTISEMENT

'ಸಿಲಿಂಡರ್‌ಗಳನ್ನು ಬೆಳಿಗ್ಗೆಯೇ ಲೋಡ್ ಮಾಡಿದ್ದರೂ ಸಂಜೆ ವೇಳೆ ಬಿಲ್ ಕೊಟ್ಟು ರಾತ್ರಿ ವಾಹನ ಚಲಾಯಿಸುವಂತೆ ಮಾಡುತ್ತಾರೆ. ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡಿಲ್ಲ. ಇದರಿಂದ ಚಾಲಕರಿಗೂ ಸಾರ್ವಜನಿಕರಿಗೂ ಅಪಾಯವಾಗುವ ಸಾಧ್ಯತೆ ಇದೆ. ಚಾಲಕರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಯಾವ ಮೂಲಸೌಲಭ್ಯಗಳನ್ನೂ ಒದಗಿಸಲಿಲ್ಲ’ ಎಂದು ಅವರು ದೂರಿದರು.

ಸಲಹೆಗಾರ ಮುನೀರ್ ಕಾಟಿಪಳ್ಳ, ಚಾಲಕರ ಸಂಘದ ಅಧ್ಯಕ್ಷ ದಯಾನಂದ ಸಾಲಿಯಾನ್‌ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಬ್ದುಲ್ ನಸೀರ್ ಇದ್ದರು.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗೆ ಬೈಕಂಪಾಡಿ ಘಟಕದಿಂದ ಅನಿಲ ಸರಬರಾಜು ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.