ADVERTISEMENT

ಭಾರತ್ ಗ್ರೂಪ್ ಆಫ್‌ ಕಂಪೆನಿ ಇಡಿ ಅನಂತ ಪೈ ನಿಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 14:44 IST
Last Updated 14 ಜುಲೈ 2019, 14:44 IST
ಅನಂತ ಜಿ. ಪೈ
ಅನಂತ ಜಿ. ಪೈ   

ಮಂಗಳೂರು: ಭಾರತ್ ಗ್ರೂಪ್ ಆಫ್‌ ಕಂಪೆನಿಸ್‌ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ್ ಜಿ. ಪೈ (46) ಭಾನುವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಿಧನರಾದರು.

ವ್ಯವಹಾರ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಇಂದೋರ್‌ಗೆ ತೆರಳಿದ್ದ ಅವರು, ಅಲ್ಲಿನ ಹೋಟೆಲೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪತ್ನಿ ಸುಮಾ ಅನಂತ ಪೈ, ಪುತ್ರಿ ಅನ್ವಿತಾ ಇದ್ದಾರೆ.

ಪರಿಚಯ:ಭಾರತ್ ಬೀಡಿ ಸಂಸ್ಥೆಯ ಸಂಸ್ಥಾಪಕ ಬಿ.ಮಂಜುನಾಥ ಪೈ ಹಿರಿಯ ಪುತ್ರ ಗಣಪತಿ ಪೈ ಮತ್ತು ಗೀತಾ ಪೈ ದಂಪತಿಯ ಪುತ್ರರಾದ ಅನಂತ ಪೈ, 1973ರ ಏಪ್ರಿಲ್ 6ರಂದು ಜನಿಸಿದ್ದರು. ಮಂಗಳೂರಿನ ಚಿನ್ಮಯ ಪ್ರಾಥಮಿಕ ಶಾಲೆ, ಕೆನರಾ ಹೈಸ್ಕೂಲ್, ಸೇಂಟ್‌ ಅಲೋಶಿಯಸ್ ಕಾಲೇಜು, ಎಸ್‌ಡಿಎಂ ಬಿಬಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು ಬಳಿಕ, ಮಂಗಳೂರು ವಿಶ್ವವಿದ್ಯಾಲಯಲ್ಲಿ ಎಂಬಿಎ ಹಾಗೂ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್‌ ಮಾಡಿದ್ದರು. ವಿದ್ಯಾರ್ಥಿಯಾಗಿದ್ದ ಸ್ಕೌಟ್ಸ್‌ನಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದರು. ವಿದ್ಯಾರ್ಥಿ ಸಂಘಟನೆಗಳ ನಾಯಕರೂ ಆಗಿದ್ದರು.

ADVERTISEMENT

ಭಾರತ್ ಗ್ರೂಪ್ ಆಫ್ ಕಂಪೆನಿಸ್‌ಗೆ 1994ರಲ್ಲಿ ಸೇರಿಕೊಂಡಿದ್ದರು. ಭಾರತ್ ಬೀಡಿ ವರ್ಕ್ಸ್‌ ಮೂಲಕ ಆರಂಭಗೊಂಡ ಈ ಕಂಪೆನಿಯು ಈಗ ಭಾರತ್ ಎಕ್ಸ್‌ಪೋರ್ಟ್ಸ್, ಭಾರತ್ ಬಿಲ್ಡರ್ಸ್, ಭಾರತ್ ಪ್ರಿಂಟರ್ಸ್, ಅಲಕನಂದಾ ಪ್ರಿಂಟರ್ಸ್, ಭಾರತ್ ಆಟೋ ಕಾರ್ಸ್, ಭಾರತ್ ಮಾಲ್, ಭಾರತ್ ಬುಕ್ ಮಾರ್ಕ್ ಸೇರಿದಂತೆ ತನ್ನ ಉದ್ಯಮ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡಿದೆ.

ಬಿ.ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ, ಮಂಜುನಾಥ ದಾಮೋದರ ಪೈ ಚಾರಿಟೆಬಲ್ ಟ್ರಸ್ಟ್‌, ಭುವನೇಂದ್ರ ಕಾಲೇಜು ಟ್ರಸ್ಟ್, ಚಿನ್ಮಯ ಹೈಸ್ಕೂಲ್, ಕಾರ್ಕಳ ವೆಂಕಟರಮಣ ದೇವಸ್ಥಾನ, ಮಂಗಳೂರು ಹವ್ಯಾಸಿ ರೇಡಿಯೊ ಕ್ಲಬ್‌ ಸೇರಿದಂತೆ ವಿವಿಧ ಸಂಸ್ಥೆ–ಸಂಘಟನೆಗಳಲ್ಲೂ ಅನಂತ ಪೈ ಸಕ್ರಿಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.