ADVERTISEMENT

‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭ

ಪ್ರೊ.ಭಾಸ್ಕರ ಹೆಗಡೆ ಅವರ ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಮೇಲೆ ಪ್ರಭಾವ: ಶ್ರದ್ಧಾ ಅಮಿತ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:28 IST
Last Updated 1 ಫೆಬ್ರುವರಿ 2026, 7:28 IST
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾಅಮಿತ್ ಮಾತನಾಡಿದರು
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾಅಮಿತ್ ಮಾತನಾಡಿದರು   

ಉಜಿರೆ: ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಪ್ರೊ. ಭಾಸ್ಕರ ಹೆಗಡೆ ಅವರ ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ ಮತ್ತು ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗಾಢ ಪ್ರಭಾವ ಬೀರಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾಅಮಿತ್ ಹೇಳಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆ ಅವರ ‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಮೇಲೆ ಅವರಿಗೆ ಅಪಾರ ಪ್ರೀತಿ-ವಿಶ್ವಾಸ ಮತ್ತು ಗೌರವ ಇತ್ತು. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಕ್ಷಿಪ್ರ ಮಾಹಿತಿ ದೊರಕುವಂತೆ ಮಾಡುತ್ತಿದ್ದರು. ಖುಷಿ ಆದಾಗ ಹೇಳದಿದ್ದರೂ ಪರವಾಗಿಲ್ಲ, ಕಷ್ಟವಾದಾಗ, ಸಮಸ್ಯೆಯಾದಾಗ ತಮ್ಮನ್ನು ಸಂಪರ್ಕಿಸುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಪ್ರಾಂಶುಪಾಲರಾಗಿದ್ದ ಡಾ.ಬಿ.ಯಶೋವರ್ಮರ ಮಾರ್ಗದರ್ಶನದಲ್ಲಿ ಅವರು ಅನೇಕ ಹೊಸ ಪ್ರಯೋಗಗಳನ್ನು ಆರಂಭಿಸಿದರು. ಅವರ ಅಪಾರ ಶಿಷ್ಯವೃಂದವೇ ಅವರ ಅಮೂಲ್ಯ ಆಸ್ತಿ ಎಂದರು.

ADVERTISEMENT

ಅಭಿನಂದನಾಗ್ರಂಥ ಬಿಡುಗಡೆ ಮಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಮಾತನಾಡಿ, ಪ್ರೊ. ಭಾಸ್ಕರ ಹೆಗಡೆ ಅವರು ನೀಡಿದ ಪ್ರಾಯೋಗಿಕ ತರಬೇತಿ, ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಚಟುವಟಿಕೆಗಳಿಂದ ಅವರ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಎಸ್‌ಡಿಎಂನ ಸಾಂಸ್ಕೃತಿಕ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಗೆ ವಿಶೇಷ ಗೌರವ, ಅಭಿಮಾನ ಉಂಟು ಮಾಡಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ ಮಾತನಾಡಿ, ಡಾ.ಬಿ.ಯಶೋವರ್ಮರ ನೇತೃತ್ವದಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮ ಅನುಷ್ಠಾನಗೊಳಿಸಿದಾಗ ಪ್ರೊ.ಭಾಸ್ಕರ ಹೆಗಡೆ ಅವರು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಎಲ್ಲಾ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳಂತೆ ಕಂಡು ಮಾರ್ಗದರ್ಶನ, ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು.

ಪ್ರೊ. ಭಾಸ್ಕರ ಹೆಗ್ಡೆ ಅವರನ್ನು ಗೌರವಿಸಲಾಯಿತು. ಪ್ರೊ.ಭಾಸ್ಕರ ಹೆಗಡೆ ಅವರ ‘ಚಿಗುರು’ ಸಂಚಿಕೆ ಮತ್ತು ಕದಂಬ ಕೃತಿಯನ್ನು ಬಿಡುಗಡೆಮಾಡಲಾಯಿತು.

ಪ್ರೊ. ಭಾಸ್ಕರ ಹೆಗಡೆ ಅವರ ಮಗ ಶಶಾಂಕ ಉಪಸ್ಥಿತರಿದ್ದರು. ಕುವೆಂಪು ವಿ.ವಿ.ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸತೀಶ್‌ಕುಮಾರ್ ಅಂಡಿಂಜೆ ಸ್ವಾಗತಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. 

ಪ್ರತಿವರ್ಷ ಐದು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಹಿರಿಯ ವಿದ್ಯಾರ್ಥಿಗಳು ಪ್ರಕಟಿಸಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸಿ ಬೀಳ್ಕೊಡಲಾಯಿತು 
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆ ಅವರ ಅಭಿನಂದನೆ ಕಾರ್ಯಕ್ರಮವನ್ನು ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾಅಮಿತ್ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.