ADVERTISEMENT

ಮಂಗಳೂರು: ಹೊಸ ಕಂಬಳ ಕರೆಗೆ ಭೂಮಿಪೂಜೆ 22ರಂದು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 7:08 IST
Last Updated 19 ಅಕ್ಟೋಬರ್ 2023, 7:08 IST

ಮಂಗಳೂರು: ಗುರುಪುರದ ಮಾಣಿಬೆಟ್ಟುಗುತ್ತು ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್‌ ಆಯೋಜಿಸುವ ಗುರುಪುರ ಕಂಬಳಕ್ಕೆ ಹೊಸ ಕರೆ ನಿರ್ಮಾಣ ನಡೆಯಲಿದ್ದು ಅದರ ಭೂಮಿಪೂಜೆ ಇದೇ 22ರಂದು ಬೆಳಿಗ್ಗೆ 8.45ಕ್ಕೆ ನಡೆಯಲಿದೆ.

‘ಗುರು‍‍ಪುರದಲ್ಲಿ ಸಾಂಪ್ರದಾಯಿಕ ಕಂಬಳಗಳು ನಡೆಯುತ್ತಿವೆಯಾದರೂ ಆಧುನಿಕ ಕಂಬಳಕ್ಕೆ ಇದೇ ಮೊದಲ ಬಾರಿ ಅವಕಾಶ ಲಭಿಸಿದೆ. ಏಪ್ರಿಲ್‌ 13ರಂದು ಕಂಬಳ ನಡೆಸುವುದಾಗಿ ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ. ಅದಕ್ಕಿಂತ ಮೊದಲು ಕಂಬಳ ಕರೆಯ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಲಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ತಿರುವೈಲ್ ಗುತ್ತು ರಾಜ್‌ಕುಮಾರ್ ಶೆಟ್ಟಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗುರುಪುರ ಕೈಕಂಬ ಜಂಕ್ಷನ್‌ನಿಂದ 3 ಕಿಲೊಮೀಟರ್ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಮೀಪ ಕರೆ ನಿರ್ಮಿಸಲಾಗುತ್ತಿದ್ದು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕರೆ 135 ಮೀಟರ್ ಉದ್ದ ಮತ್ತು 12 ಮೀಟರ್ ಅಗಲ ಇರುತ್ತದೆ. ಕೋಣ ಬಿಡುವ ಗಂತ್‌ 12 ಮೀಟರ್ ಉದ್ದ ಮತ್ತು 20 ಮೀಟರ್ ಅಗಲ ಹೊಂದಿರುತ್ತದೆ. ವಾಹನ ನಿಲುಗಡೆಗೆ ವಿಶಾಲ ಜಾಗವನ್ನು ಮೀಸಲಿಡಲಾಗುವುದು’ ಎಂದರು.

ADVERTISEMENT

ನದಿಯ ಸಮೀಪದಲ್ಲಿ, ತೆಂಕಿನಿಂದ ಬಡಗು ದಿಕ್ಕಿನ ಕಡೆಗೆ ಕರೆಯನ್ನು ನಿರ್ಮಿಸಲಾಗುತ್ತಿದೆ. ಕಂಬಳದ ಸಂದರ್ಭದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಅವರು ವಿವರಿಸಿದರು.

ಟ್ರಸ್ಟ್ ಗೌರವ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಕಾರ್ಯಾಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರ್‌ಗುತ್ತು, ಜಯಶೀಲ ಮತ್ತು ವಿನಯ ಕುಮಾರ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.