ADVERTISEMENT

ಪಣಂಬೂರು | ಹೊಂಡಮಯ ಹೆದ್ದಾರಿಯಲ್ಲಿ ಅಪಘಾತ: ಬೈಕ್ ಹಿಂಬದಿ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 7:59 IST
Last Updated 10 ಜೂನ್ 2025, 7:59 IST
<div class="paragraphs"><p>ಮೊಹಮ್ಮದ್ ಅಶ್ರಫ್</p></div>

ಮೊಹಮ್ಮದ್ ಅಶ್ರಫ್

   

ಮಂಗಳೂರು: ಇಲ್ಲಿನ ಪಣಂಬೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕಿನ ಹಿಂಬದಿ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಸುರತ್ಕಲ್ ಜನತಾ ಕಾಲೊನಿ ನಿವಾಸಿ ಮಹಮ್ಮದ್ ಅಶ್ರಫ್ ( 45) ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಕೊಳ್ನಾಡಿನ ಮೊಹಮ್ಮದ್ ಷರೀಫ್ (40) ಅವರೂ ಗಾಯಗೊಂಡಿದ್ದಾರೆ.

ADVERTISEMENT

ಅಪಘಾತ ಸಂಭವಿಸಿದ ಜಾಗದಲ್ಲಿ ಹೆದ್ದಾರಿಯು ಗುಂಡಿಮಯವಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಬೈಕ್ ಸವಾರರಿಬ್ಬರೂ ಹೆದ್ದಾರಿಗೆ ಬಿದ್ದಿದ್ದರು. ಹಿಂಬದಿ ಸವಾರ ಅಶ್ರಫ್ ಮೇಲೆ ಬುಲೆಟ್ ಟ್ಯಾಂಕರ್ ನ ಹಿಂಬದಿ ಚಕ್ರ ಹರಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆದ್ದಾರಿಯು ಹೊಂಡಮಯವಾಗಿರುವದೇ ಈ ಅಪಘಾತ ಕ್ಕೆ ಕಾರಣ. ಈ ಪ್ರದೇಶದಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಹೆದ್ದಾರಿಯನ್ನು ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಭಾರತೀಯ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ) ಆಗ್ರಹಿಸಿದ್ದಾರೆ.

ಪ್ರತಿ ಮಳೆಗಾಲದಲ್ಲಿ ಸುರತ್ಕಲ್ - ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಗುಂಡಿಗಳು ಬೀಳುವುದು, ಅವುಗಳಿಗೆ ಉರುಳಿ ದ್ವಿಚಕ್ರ ವಾಹನ ಸವಾರರು ಸಾಯುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಈ ಬಾರಿಯು ಪ್ರಥಮ ಮಳೆಗೆ ಅಪಾಯಕಾರಿ ಗುಂಡಿಗಳು ಈ ಹೆದ್ದಾರಿಯಲ್ಲಿ ಕಾಣಿಸಿಕೊಂಡಿವೆ. ಸೋಮವಾರ ರಾತ್ರಿ ಹೆದ್ದಾರಿ ಗುಂಡಿಗಳಿಗೆ ಮೊದಲ ಬಲಿಯೂ ಆಗಿದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಇಲ್ಲಿ ಯಾರೂ ಇಲ್ಲ.

ಈ ಹೆದ್ದಾರಿಯನ್ನು ಮಳೆಗಾಲಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಿ, ಇಂತಹ ದಾರುಣ ಸಾವುಗಳಿಗೆ ಕಡಿವಾಣ ಹಾಕಿ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿತ್ತು. ಈ ಬೇಡಿಕೆ ಮುಂದಿಟ್ಟು, ಶಾಸಕರು, ಸಂಸದರನ್ನು ಒತ್ತಾಯಿಸಿ ಕೂಳೂರಿನಲ್ಲಿ ಧರಣಿ ನಡೆಸಿದ್ದಕ್ಕೆ ನಮ್ಮ ಮೇಲೆ ಎಫ್ಐಆರ್ ದಾಖಲಿಸಲಾಯಿತು. ಆದರೂ ನಾವು ನಮ್ಮ ಮಿತಿಯಲ್ಲಿ ಹೋರಾಟ ಮುಂದುವರಿಸಿದ್ದೆವು. ಈಗ, ಹೆದ್ದಾರಿ ಗುಂಡಿಗಳಿಂದ ಉಂಟಾಗುವ ಸಾವುಗಳಿಗೆ ಮುನ್ನುಡಿ ಬರೆಯಲಾಗಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಲಿ. ಮೃತ ಅಶ್ರಫ್ ಕುಟುಂಬಕ್ಕೆ ಎನ್ಎಚ್ಎಐ ನಿಂದ ಪರಿಹಾರ ಕೊಡಿಸಲಿ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.