ಮಂಗಳೂರು: ಸಸಿಹಿತ್ಲುವಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆಯ ನೆನಪಿನಲ್ಲಿ ಬಿಲ್ಲವರ ವಿಶ್ವ ಸಮ್ಮೇಳನವನ್ನು ಜನವರಿ 24ರಿಂದ 26ರವರೆಗೆ ಆಯೋಜಿಸಲಾಗಿದೆ ಎಂದು ವಿಶ್ವ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಬಿಲ್ಲವ, ತೀಯಾ, ಆರ್ಯ ಈಡಿಗ, ದೀವರು, ನಾಮಧಾರಿಗಳು ಸೇರಿದಂತೆ ಎಲ್ಲ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ಸಮುದಾಯದ ಯುವಜನರ ಪ್ರತಿಭಾ ಪ್ರದರ್ಶನ ಜೊತೆಗೆ, ಕಡಲತೀರದ ಹಬ್ಬ, ಬಿಲ್ಲವರ ಜಾನಪದ ಬದುಕಿನ ಅನಾವರಣ, ಪುಸ್ತಕ ಮೇಳ, ಸಾಂಸ್ಕೃತಿಕ ಸ್ಪರ್ಧೆಗೆ ಸಮ್ಮೇಳನವು ವೇದಿಕೆ ಒದಗಿಸಲಿದೆ. ವಿಶ್ವದಾದ್ಯಂತ ಇರುವ ಸಮುದಾಯದ ಜನರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಉದ್ಯಮಿಗಳು, ಜನಪ್ರತಿನಿಧಿಗಳು ಎಲ್ಲರನ್ನೂ ಆಹ್ವಾನಿಸಲಾಗುವುದು’ ಎಂದರು.
ಸಸಿಹಿತ್ಲುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಆವರಣದಲ್ಲಿ ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಜ.24ರಂದು ದೇಶ– ವಿದೇಶದಿಂದ ಬರುವ ಗಣ್ಯರನ್ನು ಸ್ವಾಗತಿಸುವ, ತುಳುನಾಡು ಹಾಗೂ ಕರುನಾಡಿನ ಜಾನಪದ ಸೊಗಡಿನ ಸಾಂಸ್ಕೃತಿಕ ಮೆರವಣಿಗೆ, ಮುಕ್ತ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ವಿಶ್ವ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಜ.25ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಜ.26ರಂದು ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಬಹುಮಾನ ವಿತರಣೆ, ಸಮ್ಮೇಳನದ ಸಮಾರೋಪ ನಡೆಯಲಿದೆ ಎಂದರು.
ಸಂಘಟಕರಾದ ತೇಜೋಮಯ, ರಮೇಶ್ ಪೂಜಾರಿ, ಪ್ರಕಾಶ್ ಕುಮಾರ್ ಬಿ.ಎನ್, ಪ್ರದೀಪ್ ಎಸ್.ಆರ್., ನರೇಶ್ ಕುಮಾರ್ ಸಸಿಹಿತ್ಲು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.