ADVERTISEMENT

‘ಗ್ಯಾರಂಟಿ’ ಅನುಷ್ಠಾನಕ್ಕೆ ತಿಂಗಳ ಗಡುವು ವಿಧಿಸಿದ ಬಿಜೆಪಿ

ತಿಂಗಳೊಳಗೆ ಅನುಷ್ಠಾನವಾಗದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ: ನಳಿನ್‌ ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 27 ಮೇ 2023, 11:13 IST
Last Updated 27 ಮೇ 2023, 11:13 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಮಂಗಳೂರು: ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷವು ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಒಂದು ತಿಂಗಳ ಗಡುವು ವಿಧಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ‘ರಾಜ್ಯ ಸರ್ಕಾರವು ಒಂದು ತಿಂಗಳ ಒಳಗೆ ಗ್ಯಾರಂಟಿಗಳನ್ನು ಈಡೇರಿಸದೇ ಇದ್ದರೆ, ರಾಜ್ಯದಾದ್ಯಂತ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಕಾಂಗ್ರೆಸ್‌ನವರಿಗೆ ಯಾವ ರೀತಿ ತಿರುಗೇಟು ನೀಡಬೇಕೆಂಬ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚುನಾವಣೆಗೆ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಪಕ್ಷವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಯಾವುದೇ ಷರತ್ತುಗಳನ್ನು ವಿಧಿಸದೆಯೇ ಈಡೇರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾನ ನೀಡಿದ್ದರು. ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಸರ್ಕಾರ ಕೇವಲ ಆದೇಶವನ್ನು ಹೊರಡಿಸಿದೆ.  ಅವುಗಳನ್ನು ಜಾರಿಗೊಳಿಸುವುದಕ್ಕೆ ಈಗ ಒಂದೊಂದೇ ಮಾನದಂಡವನ್ನು ನಿಗದಿಪಡಿಸಲಾಗುತ್ತಿದೆ’ ಎಂದು ಅವರು ಟೀಕಿಸಿದರು. 

ADVERTISEMENT

‘ಬಿಜೆಪಿ ಶಾಸಕರನ್ನು ಗುರಿಯಾಗಿಸಿ ದ್ವೇಷ ರಾಜಕಾರಣ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ದ್ವೇಷ ರಾಜಕಾರಣವನ್ನು ಮುಂದುವರಿಸಿದರೆ ನಮ್ಮ ಪಕ್ಷವು ಸುಮ್ಮನಿರದು’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಬಿಜೆಪಿ ಶಾಸಕರು ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ವಿರೋಧ ಮಾಡಬೇಕೆಂಬ ಒಂದೇ ಕಾರಣಕ್ಕೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮವರು ಅಡ್ಡಗಾಲು ಹಾಕುವುದಿಲ್ಲ’ ಎಂದರು. 

ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಯಾರಿಗೂ ಸಚಿವ ಸ್ಥಾನ ನೀಡದಿರುವುದು ಬೇಸರ ವಿಷಯ ಎಂದರು. 

‘ಮರಳು ಮಾಫಿಯಾ, ಭೂ ಮಾಫಿಯಾ ಹಾಗೂ ಇತರೆ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವುದನ್ನು ನಾವು ಮುಂದುವರಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ, ಕಿಂಡಿ ಅಣೆಕಟ್ಟು, ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು  ಶಾಸಕರು ಪೂರ್ಣಗೊಳಿಸಲಿದ್ದಾರೆ’ ಎಂದರು.

ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂರನೇ ಸ್ಥಾನಕ್ಕೆ ತಲುಪಿದ ಕುರಿತು ಪ್ರತಿಕ್ರಿಯಿಸಿದ ನಳಿನ್‌, ‘ಈ ಹಿನ್ನಡೆಯ ಬಗ್ಗೆ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಲಿದೆ. ತಪ್ಪುಗಳನ್ನು ಅರಿತುಕೊಂಡು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಮುಂದಿನ ಸಲ ಆ ಕ್ಷೇತ್ರದಲ್ಲೂ ನಾವೇ ಗೆಲ್ಲಿದ್ದೇವೆ’ ಎಂದರು.

ಅದಕ್ಕೆ ಇನ್ನೂ ಐದು ವರ್ಷ  ಕಾಯಬೇಕಲ್ಲವೇ ಎಂಬ ಪ್ರಶ್ನೆಗೆ, ‘ಈಗಿನ ಸರ್ಕಾರ ಐದು ವರ್ಷಗಳ ಕಾಲ ಮುಂದುವರಿಯುತ್ತದೆ ಎಂಬ ವಿಶ್ವಾಸ ನನಗಿಲ್ಲ’ ಎಂದರು.

ಅರುಣ್‌ ಕುಮಾರ್‌ ಪುತ್ತಿಲ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ನಳಿನ್‌, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪುತ್ತಿಲ ಅವರ ಬಗ್ಗೆ ಗೌರವ ಇದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದರು. 

ಪುತ್ತೂರಿನಲ್ಲಿ ಅವಹೇಳನಕಾರಿ ಬ್ಯಾನರ್‌ ಅಳವಡಿಸಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್‌ ದೌರ್ಜ್ಯನ್ಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದನ್ನು ನಾನು ಆಗಲೇ ಖಂಡಿಸಿದ್ದೇನೆ. ಬ್ಯಾನರ್‌ ಅಳವಡಿಸಿದ ಬಗ್ಗೆ ದೂರು ಕೊಟ್ಟಿದ್ದು ಬಿಜೆಪಿಯಲ್ಲ, ನಗರಸಭೆಯವರು’ ಎಂದರು.

ಬಿಜೆಪಿ ಮುಖಂಡರ ಒತ್ತಡದಿಂದಲೇ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾರ್ಯಕರ್ತರು ತಪ್ಪು ಕಲ್ಪನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿ ಹೇಳುತ್ತಿರಬಹುದು. ಏಟು ತಿಂದವರು ಯಾರಾದರೂ ಬಿಜೆಪಿಯವರು ಒತ್ತಡದಿಂದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆಯೇ? ಹಲ್ಲೆ ನಡೆಸುವಂತೆ ಕಾಂಗ್ರೆಸ್‌ನವರೇ ಒತ್ತಡ ಹಾಕಿದ್ದಾರೆ ಎಂದು ನಾವೂ ಆರೋಪ ಮಾಡುತ್ತೇವೆ. ಅವರು ಒಪ್ಪುತ್ತಾರೆಯೇ’ ಎಂದು ಅವರು ಪ್ರಶ್ನಿಸಿದರು.

ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾಮಾಜಿಕ ಜೀವನದಲ್ಲಿದ್ದಾಗ ಟೀಕೆಗಳನ್ನು ಸ್ವೀಕರಿಸಬೇಕು. ಟೀಕೆಗಳು ಒಳ್ಳೆಯ ರೀತಿಯಲ್ಲಿದ್ದರೆ ಸ್ವೀಕರಿಸುತ್ತೇವೆ’ ಎಂದರು.

ಬಿಕರ್ನಕಟ್ಟೆ– ಸಾಣೂರು ನಡುವೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದಾಗಿ ಹೆದ್ದಾರಿಯ ಒಟ್ಟು ದೂರ ಹೆಚ್ಚಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್‌, ‘ಹೆದ್ದಾರಿ ಕಾಮಗಾರಿ ಅಂಗಡಿ ಜಾಸ್ತಿ ತೆರವುಗೊಳಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಬೈಪಾಸ್‌ ಮಾಡುವುದು ಸಹಜ. ಇದಕ್ಕೆ ಗುರುಪುರ ಪೇಟೆಗೆ ಇನ್ನೂ ರಸ್ತೆ ಬೇಕು. ಹಾಗಾಗಿ ಹಿಂದಿನ ರಸ್ತೆಯನ್ನು ಉಳಿಸಿಕೊಳ್ಳುತ್ತೇವೆ. ಗುರುಪುರವನ್ನು ಸಂಪರ್ಕಿಸಲು ಹಳೆ ರಸ್ತೆಯ ಹಾಗೂ ಹಳೆ ಸೇತುವೆಯ ಅಗತ್ಯ ಇದೆ’ ಎಂದರು.

ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನಾ ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ನೀಡಲಾದ ನೌಕರಿಯನ್ನು ಹಿಂಪಡೆದ ಬಗ್ಗೆ ಪ್ರತಿಕ್ರಯಿಸಿದ ನಳಿನ್‌, ‘ಅವರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಲಾಗಿತ್ತು. ಆ ನೌಕರಿಯಲ್ಲೇ ಅವರನ್ನು ಮುಂದುವರಿಸುವಂತೆ ಮುಖ್ಯಮಂತ್ರಿಯವರನ್ನು ವಿನಂತಿ ಮಾಡುತ್ತೇವೆ. ಸರ್ಕಾರ ಒಪ್ಪದಿದ್ದರೆ ಕೇಂದ್ರ ಸರ್ಕಾರದ ಅಧೀನದ ಯಾವುದಾದರೂ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುತ್ತೇವೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಾಜೇಶ್‌ ನಾಯ್ಕ್‌, ವೇದವ್ಯಾಸ ಕಾಮತ್‌, ಡಾ.ವೈ.ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.