ADVERTISEMENT

ಬಿಜೆಪಿಯಿಂದ ಆಡಳಿತ ಯಂತ್ರ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 3:46 IST
Last Updated 19 ಡಿಸೆಂಬರ್ 2020, 3:46 IST

ಮೂಡುಬಿದಿರೆ: ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳು ಚುನಾವಣೆ ಅಕ್ರಮ ಎಸಗುವ ಪ್ರಯತ್ನ ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಒತ್ತಡಕ್ಕೊಳಗಾಗಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಎಚ್ಚರಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂಡುಶೆಡ್ಡೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ರಾಜಕೀಯ ಒತ್ತಡಕ್ಕೊಳಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿರಸ್ಕರಿಸಿದ್ದಾರೆ. ಚುನಾವಣಾಧಿಕಾರಿಯ ಎದುರೇ ಕಾಂಗ್ರೆಸ್ ಅಭ್ಯರ್ಥಿ ಸಹಿ ಹಾಕಿದ ನಾಮಪತ್ರವನ್ನು, ಪರಿಶೀಲನೆ ವೇಳೆ ಸಹಿ ಹಾಕಿದ ಜಾಗ ಸರಿ ಇಲ್ಲ ಎಂದು ಅದೇ ಚುನಾವಣಾಧಿಕಾರಿ ತಿರಸ್ಕರಿಸಿದ್ದರ ಹಿಂದೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯ ಒತ್ತಡವಿದೆ’ ಎಂದು ಆರೋಪಿಸಿದರು.

ಸಣ್ಣ ಪುಟ್ಟ ಕಾರಣವೊಡ್ಡಿ ಕೆಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗಿದೆ. ಮತದಾನ ಮತ್ತು ಮತ ಎಣಿಕೆ ವೇಳೆ ಕೂಡ ಚುನಾವಣೆ ಅಕ್ರಮಗಳು ನಡೆಯುವ ಸಾಧ್ಯತೆ ಇರುವುದರಿಂದ ಇದನ್ನು ತಡಗಟ್ಟಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಮತದಾರರ ಪಟ್ಟಿಯಲ್ಲಿ ದೋಷ: ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಹೊಸ ಮತದಾರರ ಪಟ್ಟಿ ಪಡೆಯಲು ₹ 9 ಸಾವಿರ ಶುಲ್ಕ ಕಟ್ಟಬೇಕು. ಇನ್ನು ಪರಿಷ್ಕೃತ ಪಟ್ಟಿ ಪಡೆಯಲು ಅಷ್ಟೇ ಶುಲ್ಕ ಕಟ್ಟಬೇಕು. ಹಲವು ಬಾರಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು. ವಲೇರಿಯನ್ ಸಿಕ್ವೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.