ADVERTISEMENT

ಆದೇಶ ಹಿಂಪಡೆಯಲು ಬಿಜೆಪಿ ಒತ್ತಾಯ

ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 13:50 IST
Last Updated 9 ಜನವರಿ 2019, 13:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬದಿಯಡ್ಕ: ಇಲ್ಲಿನ ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ಫಿಸಿಕಲ್ ಸೈನ್ಸ್ ಹುದ್ದೆಗೆ ಮಲಯಾಳಿ ಅಧ್ಯಾಪಕರನ್ನು ನೇಮಿಸಲು ಆದೇಶಿಸಿದ ಕೇರಳ ಸರ್ಕಾರದ ನಿರ್ಧಾರ ಖಂಡನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಬಿಜೆಪಿ ಸಮಿತಿ ಹೇಳಿದೆ.

ಕನ್ನಡ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಕೇರಳ ಸರ್ಕಾರವು, ತನ್ನ ಮಲತಾಯಿ ಧೋರಣೆಯಿಂದ ಹಿಂದೆ ಸರಿಯಬೇಕು. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡದಲ್ಲಿ ಕಲಿತಿರುವ ಶಿಕ್ಷಕರನ್ನೇ ನೇಮಿಸಬೇಕು. ಆರ್ಥಿಕವಾಗಿ ಹಿಂದುಳಿದ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮಕ್ಕಳೇ ಹೆಚ್ಚಾಗಿ ಅವಲಂಬಿಸುವ ಈ ಶಾಲೆಯ ಮಕ್ಕಳ ಭವಿಷ್ಯದ ಜತೆಗೆ ಸರ್ಕಾರವು ಚೆಲ್ಲಾಟವಾಡಬಾರದು. ಮಲಯಾಳ ಶಿಕ್ಷಕರ ನೇಮಕವನ್ನು ಕೂಡಲೇ ರದ್ದುಗೊಳಿಸಿ, ಕನ್ನಡ ಶಿಕ್ಷಕನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ.

ಕಾಸರಗೋಡಿನ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಕೇರಳ ಸರ್ಕಾರವು ಶೋಷಣೆ ಮಾಡುವ ಮೂಲಕ ಸಾಂವಿಧಾನಿಕ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದೆ. ಕೇರಳ ಸರ್ಕಾರದ ಈ ಧೋರಣೆಯ ವಿರುದ್ಧ ಬದಿಯಡ್ಕ ಬಿಜೆಪಿ ಘಟಕದಿಂದ ಹೋರಾಟ ನಡೆಸಲು ನಿರ್ಧರಿಸಲಾಯಿತು.

ADVERTISEMENT

ಬಿಜೆಪಿ ಪಂಚಾಯಿತಿ ಸಮಿತಿಯ ಬುಧವಾರ ತುರ್ತು ಸಭೆ ನಡೆಸಿ, ಸರ್ಕಾರದ ಕನ್ನಡ ದಮನ ನೀತಿಯನ್ನು ಖಂಡಿಸಿ, ಒಮ್ಮತದ ನಿರ್ಣಯ ಕೈಗೊಂಡಿತು. ಸಭೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸಮಿತಿ ಅಧ್ಯಕ್ಷ ಕರಿಂಬಿಲ ವಿಶ್ವನಾಥ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಾಲಕೃಷ್ಣ ಶೆಟ್ಟಿ ಕಡಾರು, ಅವಿನಾಶ್ ರೈ, ಡಿ. ಶಂಕರ, ಲಕ್ಷ್ಮೀನಾರಾಯಣ ಪೈ, ಕೃಷ್ಣ ಮಣಿಯಾಣಿ ಮೊಳೆಯಾರು, ಎಂ.ನಾರಾಯಣ ಭಟ್, ವಕೀಲ ಬಿ. ಗಣೇಶ್, ವಿಜಯಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.