ADVERTISEMENT

ಮನೆಗಳಲ್ಲಿ ವಿಶೇಷ ಪೂಜೆ: ಸುದರ್ಶನ

ಆ.5 ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 7:40 IST
Last Updated 2 ಆಗಸ್ಟ್ 2020, 7:40 IST
ಸುದರ್ಶನ ಎಂ.
ಸುದರ್ಶನ ಎಂ.   

ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದ ಭೂಮಿಪೂಜೆಯು ಆ.5ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಮನೆಗಳಲ್ಲಿ ದೀಪ ಹಚ್ಚುವುದು, ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂದು ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಬಹುಬೇಡಿಕೆ ಹಾಗೂ ಹೋರಾಟದ ಪ್ರತಿಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು, ರಾಮನಾಮ ಪಠಣ ಜತೆಗೆ ಮಠ–ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ವಿನಂತಿಸಲಾಗುವುದು ಎಂದರು.

ಆ.5ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಈ ಕಾರ್ಯಕ್ರಮವನ್ನು ಮನೆಯಲ್ಲೇ ಕೂತು ನೋಡುವ ಜತೆಗೆ ಮನೆಯಲ್ಲಿ ದೀಪ ಹಚ್ಚುವುದು, ರಾಮನ ಜಪ ಪಠಣ, ಮಠ ಮಂದಿರಗಳಲ್ಲಿ ಈ ಸಮಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯ ವಿನಂತಿ ಮಾಡಲಾಗಿದೆ. ಈ ಮೂಲಕ ರಾಮ ಮಂದಿರ ನಿರ್ಮಾಣದ ಕಾರ್ಯ ವಿಘ್ನ ಇಲ್ಲದೇ ಸರಾಗವಾಗಿ ಸಾಗಬೇಕು ಎಂದು ಹೇಳಿದರು.

ADVERTISEMENT

1990 ಹಾಗೂ 1992ರಲ್ಲಿ ರಾಮಜನ್ಮಭೂಮಿಗೆ ಹೋರಾಟ ಮಾಡಿದ ಕರಸೇವಕರನ್ನು ಗುರುತಿಸಿ ಗೌರವಿಸಲಾಗುವುದು. ಈಗಾಗಲೇ ಸಂಘದಿಂದ ಅಂತಹ ಕರಸೇವಕರ ಪಟ್ಟಿ ಸಿದ್ಧಪಡಿಸಲಾಗಿದೆ. ಸಂಘ ಹಾಗೂ ಬಿಜೆಪಿ ಜತೆಯಾಗಿ ಈ ಕರಸೇವಕರನ್ನು ಗೌರವಿಸುತ್ತದೆ. ಈ ಸಂದರ್ಭ ಮಡಿದ ಕರಸೇವಕರಿಗೂ ಶ್ರದ್ಧಾಂಜಲಿ ಸಮರ್ಪಣೆ ನಡೆಯಲಿದೆ. ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಂಬತ್ತು ಮಂಡಲಗಳಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಕಸ್ತೂರಿ ಪಂಜ, ರಾಧಾಕೃಷ್ಣ, ಜಗದೀಶ್ ಶೇಣವ, ಜಿತೇಂದ್ರ ಕೊಟ್ಟಾರಿ, ಸಂದೇಶ್ ಶೆಟ್ಟಿ, ರಣ್‌ದೀಪ್ ಕಾಂಚನ್, ಸುಧೀರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.