ಬಿ.ವೈ.ವಿಜಯೇಂದ್ರ
ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ನಂತರ ಕಾನೂನು ಸುವ್ಯವಸ್ಥೆ ನಿರ್ವಹಣೆಯ ನೆಪ ಒಡ್ಡಿ, ಪೊಲೀಸ್ ಇಲಾಖೆ ಗೂಂಡಾ ವರ್ತನೆ ತೋರುತ್ತಿದೆ. ಆದರೂ ನಮ್ಮ ಕಾರ್ಯಕರ್ತರು ಸಮಾಧಾನದಲ್ಲಿದ್ದಾರೆ. ಇದನ್ನು ದೌರ್ಬಲ್ಯ ಎಂದು ಭಾವಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.
ದಕ್ಷಿಣ ಕನ್ನಡದಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪರಾಮರ್ಶಿಸಲು ಬಿಜೆಪಿ ನಾಯಕರ ನಿಯೋಗದೊಂದಿಗೆ ಸೋಮವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಪೊಲೀಸ್ ಇಲಾಖೆ ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡುವುದನ್ನು ಮುಂದುವರಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬೀಳಲಿದೆ. ಅದಕ್ಕೆ ನೀವೇ ಹೊಣೆ ಎಂದು ಇಲ್ಲಿನ ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದ್ದೇವೆ’ ಎಂದರು.
‘ಜಿಲ್ಲೆಯ ಸುಳ್ಯ ಮತ್ತು ಇತರ ಕೆಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗ ದಳ ಹಿಂದೂ ಜಾಗರಣ ವೇದಿಕೆ ಮುಖಂಡರನ್ನು ಗುರಿಯಾಗಿಸಿ, ಪೊಲೀಸರು ಮಧ್ಯರಾತ್ರಿ ಅವರ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಅವರ ಭಾವಚಿತ್ರ ಕ್ಲಿಕ್ಕಿಸುತ್ತಿದ್ದಾರೆ. ಕಾರ್ಯಕರ್ತರೊಬ್ಬರ ಮನೆಗೆ ತೆರಳಿದ್ದ ಮಹಿಳಾ ಪೊಲೀಸ್ ಒಬ್ಬರು ಆತನ ತಂದೆ ತಾಯಿಗೆ ರಿವಾಲ್ವರ್ ತೋರಿಸಿದ್ದಾರೆ. ನಿಮ್ಮ ಮಗ ಓಡಾಡಲು ಸಾಧ್ಯವಿಲ್ಲ. ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದೆಲ್ಲ ಬೆದರಿಸಿದ್ದಾರೆ’ ಎಂದು ಅವರು ಆರೋಪಿಸಿದರು.
'ಎಲ್ಲ ಕೊಲೆಗಳಿಗೂ ಹಿಂದೂ– ಮುಸ್ಲಿಂ ಎಂದು ಕೋಮು ಬಣ್ಣ ನೀಡಬಾರದು’ ಎಂದರು.
‘ಜಿಲ್ಲೆಯಲ್ಲಿ ನಡೆದ ಮೂರೂ ಹತ್ಯೆ (ವಯನಾಡಿನ ಅಶ್ರಫ್, ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರಹಿಮಾನ್) ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಿಕೊಡಲು ನಮ್ಮ ಅಭ್ಯಂತರ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಬಿಜೆಪಿಯ ಕಾರ್ಯಕರ್ತರ ಅಳಲು ಆಲಿಸುವ ಸಭೆಯಲ್ಲಿ ಸುಹಾಸ್ ಶೆಟ್ಟಿ ತಂದೆ ಮೋಹನ್ ಮತ್ತು ತಾಯಿ ಸುಲೋಚನಾ ಅವರು ಭಾಗಿಯಾದ್ದರು.
ಅಳಲು ಆಲಿಸಿದ ಬಿಜೆಪಿ ನಿಯೋಗ: ಆರ್‌ಎಸ್‌ಎಸ್ ಪ್ರಮುಖರ ಜೊತೆ ನಿಯೋಗವು ಇಲ್ಲಿನ ಸಂಘ ನಿಕೇತನದಲ್ಲಿ ಗೋಪ್ಯ ಸಭೆ ನಡೆಸಿತು. ಬಳಿಕ ಪ್ರತ್ಯೇಕ ಸಭೆ ನಡೆಸಿ ಕಾರ್ಯಕರ್ತರ ಅಳಲು ಆಲಿಸಿತು. ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರೂ ಭಾಗವಹಿಸಿ ತಮಗಾದ ಸಮಸ್ಯೆಗಳನ್ನು ಹೇಳಿಕೊಂಡರು. ನಂತರ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಿತು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಉಪನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಪಕ್ಷದ ಮುಖಂಡರಾದ ಸದಾನಂದ ಗೌಡ, ಭಾಸ್ಕರ್ ರಾವ್ ನಿಯೋಗದಲ್ಲಿದ್ದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.