ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಎದುರು ಬಿಜೆಪಿ ಯುವ ಮೋರ್ಚಾದ ಮಂಗಳೂರು ದಕ್ಷಿಣ ಘಟಕದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಪ್ರಜಾವಾಣಿ ಚಿತ್ರ
ಮಂಗಳೂರು: ಶಾಲೆಗಳ ಮೈದಾನಗಳಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ನಡೆಯುತ್ತ ಬಂದಿರುವ -ಗಣೇಶೋತ್ಸವ, ಶಾರದೋತ್ಸವ, ಮೊಸರು ಕುಡಿಕೆ ಸಹಿತ ಹಿಂದೂ ಹಬ್ಬಗಳ ಆಚರಣೆಯನ್ನು ನಿರ್ಬಂಧಿಸಿ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ಮಂಗಳೂರು ದಕ್ಷಿಣ ಘಟಕದ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧ ಗಡಿಯಾರ ಗೋಪುರದ ಬಳಿ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಯಿತು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ಕೋಮು ದ್ವೇಷ ಮನಸ್ಥಿತಿಯನ್ನು ಹೊಂದಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿಜೆಪಿ ದಕ್ಣಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, 'ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟ ಇಲ್ಲಿ ಪ್ರಾರಂಭವಾಗಿದೆ. ಇನ್ನು ಹಳ್ಳಿ ಹಳ್ಳಿಯಲ್ಲೂ ಈ ಬಗ್ಗೆ ಪ್ರತಿಭಟನೆ ನಡೆಸಲಿದ್ದೇವೆ. ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುವ ಕೆಲಸ ಮಾಡಿದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉಳಿಯದು. ಸಿದ್ದರಾಮಯ್ಯ ಅವರಿಗೆ ದೇವರು ಸದ್ಭುದ್ದು ಕೊಡಲಿ ಎಂದು ಭಜನೆ ಮಾಡಿದ್ದೇವೆ' ಎಂದರು.
'ಸರ್ಕಾರಿ ಶಾಲೆಗಳು ಕಾಂಗ್ರೆಸ್‌ನವರ ಅಪ್ಪನ ಆಸ್ತಿ ಅಲ್ಲ. ಶಾಲೆಗಳಲ್ಲಿ, ಹಾಗೂ ಅವುಗಳ ಮೈದಾನಗಳಲ್ಲಿ ನೂರಾರು ವರ್ಷಗಳಿಂದ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್ ಅವರ ನೇತೃತ್ವದಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆ ಶುರುವಾಗಿತ್ತು. ಕೆಲವು ಶಾಲಾ ಮೈದಾನದಲ್ಲಿ ಹಿಂದಿನಿಂದಲೂ ಇಂತಹ ಆಚರಣೆಗಳು ನಡೆದುಕೊಂಡು ಬಂದಿವೆ. ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿಯೂ ಶಾಲಾ ಮೈದಾನದಲ್ಲಿ ಇವುಗಳನ್ನು ನಡೆಸಲಾಗುತ್ತದೆ' ಎಂದರು.
'ರಾಹುಲ್ ಗಾಂಧಿ ಹಿಂದುತ್ವವಾದದ ವಿರುದ್ಧ ಮಾತನಾಡಿದಾಗ ಕಾಂಗ್ರೆಸ್‌ನವರು ಧ್ವನಿ ಎತ್ತಿಲ್ಲ. ಈ ರೀತಿಯ ಆದೇಶ ಹೊರಡಿಸಿದಾಗಲೂ ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಉತ್ತರ ಕೊಡಬೇಕು' ಎಂದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಂದನ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಮುಖಂಡರಾದ ರವಿಶಂಕರ ಮಿಜಾರು, ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ನಿತಿನ್ ಕುಮಾರ್, ಮೌನೇಶ್ ಚೌಟ ಪಾಲಿಕೆ ಸದಸ್ಯರು ಭಾಗವಹಿಸಿದರು.
ನಾದ ಸಂಕೀರ್ತನಾ ಮತ್ತು ಪರಂಜ್ಯೋತಿ ಭಜನಾ ತಂಡದವರು ಭಜನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.