ADVERTISEMENT

ಕೆಂಪುಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:57 IST
Last Updated 11 ಜುಲೈ 2025, 4:57 IST
ಸತೀಶ್‌ ಕುಂಪಲ
ಸತೀಶ್‌ ಕುಂಪಲ    

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿರುವ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜುಲೈ 14ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮನೆ ನಿರ್ಮಾಣ, ಕಟ್ಟಡ ನಿರ್ಮಾಣಕ್ಕೆ ಕೆಂಪುಕಲ್ಲು, ಮರಳು ಸಿಗುತ್ತಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಕಾರ್ಮಿಕರು ಕೈಗೆ ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ನಿಯಮ ಸರಳೀಕರಣ ಮಾಡುವುದಾಗಿ ಹೇಳಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.

ಅಕ್ರಮವಾಗಿ ಕೆಂಪುಕಲ್ಲು ಕೋರೆ, ಮರಳು ಗಣಿಗಾರಿಕೆ ನಡೆಸುವನ್ನು ನಾವು ಬೆಂಬಲಿಸುವುದಿಲ್ಲ. ಆದರೆ, ರಾಜ್ಯ ಸರ್ಕಾರ ಅಧಿಕೃತ ಪರವಾನಗಿ ನೀಡುವಲ್ಲಿ ಎಡವಿದೆ. ಪರವಾನಗಿಗೆ ಅರ್ಜಿ ಸಲ್ಲಿಸಿ 21 ದಿನಗಳ ಒಳಗೆ ಅನುಮತಿ ಸಿಗಬೇಕು, ಈಗ ಆರು ತಿಂಗಳಾದರೂ ಪರವಾನಗಿ ಸಿಗುತ್ತಿಲ್ಲ. ಕೇರಳದಲ್ಲಿ ಒಂದು ಟನ್ ಕೆಂಪು ಕಲ್ಲಿಗೆ ₹32 ತೆರಿಗೆ ಇದ್ದರೆ, ಇಲ್ಲಿ ₹256 ಇದೆ. ಹಿಂದೆ ಬಿಜೆಪಿ ಸರ್ಕಾರದ ಇದ್ದಾಗ ₹91 ತೆರಿಗೆ ನಿಗದಿಪಡಿಸಿತ್ತು. ಶೀಘ್ರ ಸಿಗದ ಪರವಾನಗಿ, ಹೆಚ್ಚಿದ ತೆರಿಗೆ ಮೊತ್ತದಿಂದಾಗಿ ಅನಧಿಕೃತ ಕೋರೆಗಳು ಹೆಚ್ಚಾಗಿವೆ ಎಂದು ಹೇಳಿದರು.

ADVERTISEMENT

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿಆರ್‌ಝೆಡ್‌ನಲ್ಲಿ ಎರಡು ವರ್ಷಗಳಿಂದ ಮರಳು ತೆಗೆಯಲು ಮರಳು ನೀತಿ ಜಾರಿಗೊಳಿಸಿಲ್ಲ. ಈ ಸಂಬಂಧ ಸಭೆಯೂ ನಡೆದಿಲ್ಲ ಎಂದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಮರಳು ವ್ಯವಹಾರದಲ್ಲಿ ರಾಜಕೀಯ ಪುಢಾರಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಕೇರಳ ಮಾದರಿಯಲ್ಲಿ ಇಲ್ಲಿಯೂ ಕೆಂಪುಕಲ್ಲು ಅಧಿಕೃತ ಪೂರೈಕೆಗೆ ಅವಕಾಶ ನೀಡಲಿ ಎಂದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆ ಖಾಲಿ ಇದ್ದು, ಹಿರಿಯ ಭೂ ವಿಜ್ಞಾನಿ ಪ್ರಭಾರಿಯಾಗಿದ್ದಾರೆ. ಮರಳು ಹಾಗೂ ಕೆಂಪುಕಲ್ಲು ಸಮಸ್ಯೆ ಬಗ್ಗೆ ಹೇಳಿದರೆ ಸ್ಪಂದನೆ ಇಲ್ಲ ಎಂದರು.

ಮದುವೆಯಾಗುವುದಾಗಿ ನಂಬಿಸಿ, ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ, ಪುತ್ತೂರಿನ ಸಂತ್ರಸ್ತೆಯ ಮನೆಗೆ ಬಿಜೆಪಿ ನಿಯೋಗ ತೆರಳಿ ಬೆಂಬಲ ನೀಡಿದೆ. ಯುವತಿ ಹಾಗೂ ಆಕೆಯ ಮಗುವಿಗೆ ನ್ಯಾಯ ಸಿಗಬೇಕು. ಆರೋಪಿ ಕೃಷ್ಣ ರಾವ್ ತಂದೆ ಜಗನ್ನಿವಾಸ ರಾವ್ ಅವರಿಗೆ ಪಕ್ಷದಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಉತ್ತರ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸತೀಶ್ ಹೇಳಿದರು.

ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಂಜುಳಾ ರಾವ್, ಸಂಜಯ ಪ್ರಭು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.