ADVERTISEMENT

ಸರ್ಕಾರದ ಮೇಲೆ ಜನರಿಗೆ ನಂಬಿಕೆ

ಮನೆ ಮನೆಗೆ ಕೇಂದ್ರ ಸರ್ಕಾರದ ಸಾಧನೆ: ನಳಿನ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:34 IST
Last Updated 5 ಜೂನ್ 2020, 16:34 IST
ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿದರು.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿದರು.   

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನರಿಗೆ ಬರೆದಿರುವ ‘ನೀವು ಪ್ರೇರಕರು ನಾನು ಸೇವಕ’ ಪತ್ರದ ಸಾರಾಂಶ ಹಾಗೂ ಒಂದು ವರ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಪಾಂಡೇಶ್ವರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಕೋವಿಡ್–19 ನಿಂದ ದೇಶ ಸಂಕಷ್ಟದಲ್ಲಿದ್ದರೂ, ಆರ್ಥಿಕವಾಗಿ ಮೇಲೆತ್ತುವಲ್ಲಿ ಸರ್ಕಾರದ ಕಾರ್ಯ ವಿಶೇಷವಾದದ್ದು. ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಭಾರತೀಯರು ಸ್ಪಂದಿಸಿದ ರೀತಿ ಜನರಿಗೆ ಸರ್ಕಾರದ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ’ ಎಂದರು.

ಒಂದು ವರ್ಷದ ಸಾಧನೆಯ ಕುರಿತು ಹಾಗೂ ದೇಶದ ಜನರಿಗೆ ಪ್ರಧಾನಮಂತ್ರಿಗಳು ಬರೆದಿರುವ ಪತ್ರದ ಸಾರಾಂಶವನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1 ಮನೆಗೆ ಇಬ್ಬರಂತೆ ತೆರಳಿ ಜನತೆಗೆ ಸರ್ಕಾರದ ಸಾಧನೆಯ ತಿಳಿಸಲಾಗುವುದು ಎಂದು ಹೇಳಿದರು.

ADVERTISEMENT

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಸ್ವಾತಂತ್ರ್ಯ ನಂತರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಜನರಿಗೆ ನೀಡಿದ್ದ ವಾಗ್ದಾನವನ್ನು ಸರ್ಕಾರ ಪೂರ್ಣಗೊಳಿಸಿದೆ. ರಾಮಮಂದಿರದ ತೀರ್ಪಿನ ಸಂದರ್ಭದಲ್ಲೂ ಸರ್ಕಾರ ಕೈಗೆತ್ತಿಕೊಂಡ ಕ್ರಮಗಳು ಜನರಿಗೆ ಹೊಸ ಭರವಸೆ ಮೂಡಿಸಿವೆ. ಲಾಕ್‌ಡೌನ್ ಸಂದರ್ಭದಲ್ಲಿ ₹20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಜನರ ಸಂಕಟ್ಟಕ್ಕೆ ಹೆಗಲು ನೀಡಿದೆ’ ಎಂದು ತಿಳಿಸಿದರು.

ಮೇಯರ್ ದಿವಾಕರ್ ಪಾಂಡೇಶ್ವರ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ.ಸುರೇಂದ್ರ, ರೂಪಾ ಡಿ. ಬಂಗೇರ, ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಕಿರಣ್ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.