ADVERTISEMENT

ಧರ್ಮದ ಹೆಸರಿನಲ್ಲಿ ಪ್ರಚೋದನೆಗೆ ಬಿಜೆಪಿ ಯತ್ನ

ಮಾಜಿ ಸಚಿವ ಬಿ.ರಮಾನಾಥ ರೈ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 10:22 IST
Last Updated 19 ಜನವರಿ 2020, 10:22 IST
ಬಿ.ರಮಾನಾಥ ರೈ
ಬಿ.ರಮಾನಾಥ ರೈ   

ಮಂಗಳೂರು: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧದ ಪ್ರತಿಭಟನೆ ನೆಪದಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದದ ಪ್ರಯೋಗಾಲಯ ಮಾಡಿಕೊಂಡಿರುವ ಸಂಘಟನೆಯ ನಾಯಕರು ಈಗ ಕನಕಪುರಕ್ಕೂ ಕಾಲಿರಿಸಿದ್ದಾರೆ. ಅಲ್ಲಿಯೂ ಜನರನ್ನು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಶಾಂತಿ, ಸಹಬಾಳ್ವೆಯನ್ನು ಬಯಸುವ ಜನರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ’ ಎಂದರು.

ಕ್ರೈಸ್ತ ಧರ್ಮೀಯರು ಯಾವತ್ತೂ ಪ್ರಚೋದನೆಗೆ ಒಳಗಾಗಿಲ್ಲ. ಹಿಂದೆ ಕರಾವಳಿ ಸೇರಿದಂತೆ ವಿವಿಧೆಡೆ ಚರ್ಚ್‌ಗಳ ಮೇಲೆ ದಾಳಿ ನಡೆದಾಗಲೂ ಅವರು ಶಾಂತಿಯಿಂದಲೇ ಇದ್ದರು. ಇಂತಹ ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ವರ್ತಿಸುತ್ತಿದ್ದಾರೆ. ಪ್ರಚೋದನೆಯ ನಂತರದ ಬೆಳವಣಿಗೆಗಳ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಚೆಕ್‌ ಕೊಡಲಾಗುತ್ತಿತ್ತು

‘ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಊಟಕ್ಕೆ ನೀಡುತ್ತಿದ್ದ ಅಕ್ಕಿಯ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ಯಾವತ್ತೂ ಅಲ್ಲಿಗೆ ಅಕ್ಕಿಯನ್ನು ಪೂರೈಸಿರಲಿಲ್ಲ. ಪ್ರತಿ ತಿಂಗಳು ₹ 4 ಲಕ್ಷವನ್ನು ಚೆಕ್‌ ಮೂಲಕ ನೀಡಲಾಗುತ್ತಿತ್ತು. ಆ ಹಣವನ್ನು ವಿದ್ಯಾರ್ಥಿಗಳ ಅನ್ನ ದಾಸೋಹಕ್ಕೆ ಬಳಸದೇ ದುರುಪಯೋಗ ಮಾಡಿಕೊಳ್ಳಲಾಗುತ್ತಿತ್ತು’ ಎಂದು ರಮಾನಾಥ ರೈ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್‌) ಜಾರಿಯಿಂದ ಜನರಿಗೆ ತೊಂದರೆ ಆಗಲಿದೆ ಎಂಬುದು ಒಂದು ಭಾಗ. ಧರ್ಮದ ಹೆಸರಿನಲ್ಲಿ ಜನರ ನಡುವೆ ತಾರತಮ್ಯ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಯಾವುದೇ ಕಾಯ್ದೆಯನ್ನು ಜಾರಿ ಮಾಡುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಅದನ್ನು ಈ ದೇಶದ ಜನರು ಒಪ್ಪಲು ಸಾಧ್ಯವಿಲ್ಲ ಎಂದರು.

ದೇಶ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಉದ್ಯೋಗ ನಷ್ಟ, ಮಿತಿ ಮೀರಿದ ಹಣದುಬ್ಬರ, ಜಿಡಿಪಿ ಕುಸಿತದಿಂದ ದೇಶ ಅಪಾಯದಲ್ಲಿದೆ. ಆದರೆ, ಬಿಜೆಪಿ ನಾಯಕರು ಮತೀಯ ವಿಚಾರಗಳನ್ನು ಮುಂದಿಟ್ಟು ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಎಲ್ಲದಕ್ಕೂ ಅಲ್ಪಸಂಖ್ಯಾತರನ್ನೇ ತೋರಿಸುತ್ತಿದ್ದಾರೆ. ಪದೇ ಪದೇ ಪಾಕಿಸ್ತಾನದ ವಿಚಾರ ಮುಂದಿಟ್ಟು ವಾಸ್ತವಿಕ ಸಂಗತಿಗಳನ್ನು ಮರೆಮಾಚುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಮೋನಪ್ಪ ಶೆಟ್ಟಿ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಪ್ಪಿ, ದೀಪಕ್ ಪೂಜಾರಿ, ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.